ರಾಯಚೂರು ಜಿಲ್ಲೆಯಲ್ಲಿ ಭತ್ತದ ಇಳುವರಿ ಕುಸಿದಿರುವ ಕಾರಣದಿಂದ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದ ರೈತರು ನಗರದ ರಾಜೇಂದ್ರ ಗಂಜ್ ಮಾರುಕಟ್ಟೆಯಲ್ಲಿ ಒಂದೇ ದಿನ ದಾಖಲೆಯ 66 ಸಾವಿರ ಚೀಲ ಭತ್ತ ಮಾರಾಟ ಮಾಡಿ ಉತ್ತಮ ಲಾಭ ಪಡೆದಿದ್ದಾರೆ.
ರಾಯಚೂರಿನ ಎಪಿಎಂಸಿಗೆ ಕಳೆದೊಂದು ವಾರದಿಂದ ಭತ್ತದ ಆವಕ ಹೆಚ್ಚಿದೆ. ಜಿಲ್ಲೆಯ ಭತ್ತದ ನಾಡು ಸಿಂಧನೂರು ತಾಲೂಕುವೊಂದರಲ್ಲೇ ಸುಮಾರು 5,600 ಎಕರೆ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದೆ. ಕಟಾವಿಗೂ ಮುನ್ನವೇ ಕ್ವಿಂಟಾಲ್‌ಗೆ ₹3,000ದಿಂದ ₹3,200 ದರವಿದೆ. ಎಪಿಎಂಸಿಯಲ್ಲಿ 66,145 ಚೀಲ ಮಾರಾಟವಾಗಿ ದಾಖಲೆ ಮೂಡಿಸಿದೆ. ಕಳೆದ ಎರಡ್ಮೂರು ದಿನಗಳಿಂದಲೂ 56 ಸಾವಿರ ಕ್ವಿಂಟಾಲ್ ಭತ್ತ ಆವಕವಾಗಿದೆ.
ರಾಯಚೂರು ಎಪಿಎಂಸಿಯಲ್ಲಿ ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶದ ರೈತರದ್ದೇ ಪಾರುಪತ್ಯ ಎನ್ನುವಂತಾಗಿದೆ. ಜಿಲ್ಲೆಯ ಸಿಂಧನೂರು, ಸಿರವಾರ, ಮಾನ್ವಿ, ರಾಯಚೂರು ತಾಲೂಕುಗಳಲ್ಲೂ ಅಲ್ಲಲ್ಲಿ ಭತ್ತದ ಕಟಾವು ನಡೆದಿದ್ದು, ಉತ್ತಮ ಬೆಲೆ ಇರುವುದರಿಂದ ಕೆಲವರು ಮಾರಾಟಕ್ಕೆ ಮುಂದಾಗಿದ್ದಾರೆ.
ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಭತ್ತಕ್ಕೆ ಸರಿಯಾದ ದರ ದೊರಕದ ಹಿನ್ನೆಲೆಯಲ್ಲಿ ಅಲ್ಲಿನ ರೈತರು ರಾಯಚೂರಿಗೆ ಆಗಮಿಸಿ ಭತ್ತ ಮಾರಾಟ ಮಾಡುವುದು ಕಳೆದ ಹಲವು ವರ್ಷಗಳಿಂದ ನಡೆದುಕೊಂಡೇ ಬಂದಿದೆ. ಈ ಬಾರಿಯಂತೂ ಇಲ್ಲಿ ಇಳುವರಿ ಕುಸಿದಿರುವ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳ ರೈತರು ತಂದಿರುವ ಭತ್ತ ನಿಂತಲ್ಲೇ ಖರೀದಿಯಾಗಿದ್ದು, ಭರಪೂರ ದುಡ್ಡು ದೊರೆತಿದೆ.
ಈ ಸುದ್ದಿ ಓದಿದ್ದೀರಾ? ಮಹಾಧರಣಿ | ದೇಶದ ಜನರ ಅನಾರೋಗ್ಯದಲ್ಲೂ ಮೋದಿ ಸರ್ಕಾರ ಲೂಟಿ ಮಾಡಿದೆ: ರವಿ ಪುಣಚ
ಕಳೆದ ವರ್ಷ ನವೆಂಬರ್‌ನಲ್ಲಿ ಸೋನಾ ಮಸೂರಿ ಹಾಗೂ ರಾಜಹಂಸ ಭತ್ತಕ್ಕೆ ಕ್ವಿಂಟಾಲ್‌ಗೆ ₹1,750 ದರವಿದ್ದರೆ, ಈ ಬಾರಿ ಪ್ರತಿ 75 ಕೆಜಿ ಭತ್ತಕ್ಕೆ ₹1,880 ರಿಂದ ₹2,100ರಷ್ಟು ದರವಿದೆ. ಸಿಂಧನೂರು ಭಾಗದಲ್ಲಿ ಕಳೆದ ವರ್ಷ ಆರ್‌ಎನ್‌ಆರ್ ಕ್ವಿಂಟಾಲ್ ಭತ್ತಕ್ಕೆ ₹1,800 ಇತ್ತು. ಈ ಬಾರಿ 75 ಕೆಜಿಗೆ ₹2,500ರವರೆಗೂ ಮಾರಾಟವಾಗುತ್ತಿದೆ.