ಬೆಲೆ ಏರಿಕೆ ನಿಯಂತ್ರಿಸಬೇಕು ಮತ್ತು ಉದ್ಯೋಗ ಸೃಷ್ಟಿಸಬೇಕು ಎಂದು ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ರಾಯಚೂರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. “ಕೇಂದ್ರದ ಒಕ್ಕೂಟ ಸರ್ಕಾರ ಮುಂದುವರೆಸುತ್ತಿರುವ ನವ ಉದಾರೀಕರಣದ ನೀತಿಗಳಿಂದ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಮತ್ತೊಂದು ಕಡೆ ನಿರುದ್ಯೋಗಿಗಳ ಸಂಖ್ಯೆಯೂ ಕೂಡ ಹೆಚ್ಚಳವಾಗುತ್ತಿದ್ದು, ಇದರಿಂದ ಜನ ಸಾಮಾನ್ಯರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು” ಎಂದು ಆಗ್ರಹಿಸಿದರು.
“ನವ ಉದಾರೀಕರಣ ನೀತಿಗಳಿಂದ ದೇಶದ ಜನತೆ ಅದರಲ್ಲೂ ಬಡ ಜನತೆ ಬೆಲೆ ಏರಿಕೆಯಿಂದಾಗಿ ತೀವ್ರವಾಗಿ ನಲುಗುವಂತಾಗಿದೆ. ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್, ವಿದ್ಯುತ್, ಕೃಷಿ ಹೂಡಿಕೆಗಳಾದ ಬೀಜ, ರಾಸಾಯನಿಕ ಗೊಬ್ಬರ, ಕೀಟ ನಾಶಕ, ಕೃಷಿ ಉಪಕರಣಗಳು, ನಾಗರಿಕರ ಆರೋಗ್ಯದ ಔಷಧಿ ಬೆಲೆಗಳು ಶೈಕ್ಷಣಿಕ ಸೌಲಭ್ಯದ ಡೊನೇಷನ್ ಹಾಗೂ ಫೀಸುಗಳ ಬೆಲೆಗಳು ಗಗನಮುಖಿಯಾಗಿವೆ. ಈ ಎಲ್ಲ ಬೆಲೆ ಏರಿಕೆಯ ಹಿಂದೆ ಅಗತ್ಯ ವಸ್ತುಗಳ ಬೆಲೆಗಳ ಮೇಲಿನ ನಿಯಂತ್ರಣ ವಾಪಸ್ ಪಡೆದಿದ್ದು, ಸಹಾಯಧನವನ್ನು ಕಡಿತ ಮಾಡಿರುವುದು ಮುಕ್ತ ವ್ಯಾಪಾರಕ್ಕೆ ದೇಶವನ್ನು ತೆರೆದಿದ್ದು ಮತ್ತು ಕಾಳಸಂತೆಕೋರತನಕ್ಕೆ ಕುಮ್ಮಕ್ಕು ನೀಡಿರುವುದು ಕಾರಣವಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ” ಎಂದು ಆರೋಪಿಸಿದರು.
“ಕೇಂದ್ರ ಸರ್ಕಾರ ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು. ಖಾಲಿ ಇರುವ ಎಲ್ಲ ಉದ್ಯೋಗಗಳನ್ನು ಭರ್ತಿ ಮಾಡಬೇಕು. ಉದ್ಯೋಗ ನೀಡುವವರೆಗೆ ನಿರುದ್ಯೋಗ ಭತ್ತೆ ನೀಡಬೇಕು. ಎಲ್ಲ ಹಂತದ ಬೆಲೆ ಏರಿಕೆಯನ್ನು ತಡೆಗಟ್ಟಬೇಕು. ಅನ್ನಭಾಗ್ಯಕ್ಕೆ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಒದಗಿಸಬೇಕು. ವಿದ್ಯುತ್ ರಂಗದ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ವಿಧಾನವನ್ನು ನಿಲ್ಲಿಸಬೇಕು. ರಾಜ್ಯ ಮತ್ತು ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಸರ್ಕಾರದ ವೈಫಲ್ಯ ವಿರುದ್ಧ ರಾಜ್ಯಾದ್ಯಂತ ಶುಕ್ರವಾರ ಬಿಜೆಪಿ ಪ್ರತಿಭಟನೆ: ಬಿಎಸ್‌ವೈ
ಪ್ರತಿಭಟನೆಯ ನೇತೃತ್ವವನ್ನು ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ಜಿ ವೀರೇಶ, ಡಿ ಎಸ್ ಶರಣಬಸವ, ಹೆಚ್ ಪದ್ಮಾ, ಕರಿಯಪ್ಪ ಅಚ್ಚೊಳ್ಳಿ, ವರಲಕ್ಷ್ಮಿ ರಮೇಶ, ಜಿಲಾನಿಪಾಶಾ, ಗೋಕುರಮ್ಮ, ಗಂಗಮ್ಮ, ಇಂದಿರಾ, ಮೌಲಪ್ಪ, ವೀರೇಶ, ಕುರುಮಪ್ಪ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.
ವರದಿ : ಹಫೀಜುಲ್ಲ, ಸಿಟಿಜನ್ ಜರ್ನಲಿಸ್ಟ್