ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರು ಎದುರಿಸುತ್ತಿರುವ ನೀರಿನ ಸಮಸ್ಯೆ ನಿವಾರಣೆಗೆ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣ ಮಡಲು ಶೀಘ್ರದಲ್ಲಿಯೇ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಹೇಳಿದರು.
ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ತಿಮ್ಮಾಪುರು ಏತ ನೀರಾವರಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿ ರಾಜ್ಯವೂ ಸೇರಿದಂತೆ ನೆರೆ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಗೂ ಸಮಸ್ಯೆಯಾಗಿದೆ. ಅಂತಾರಾಜ್ಯ ನೀರಾವರಿ ಯೋಜನೆಯಡಿ ನೀರಿನ ಹಂಚಿಕೆ ವಿಷಯದಲ್ಲಿ ಸಮಾಲೋಚನೆ ನಡೆಸಿ ಪರಿಹರಿಸಿಕೊಳ್ಳಬೇಕಿದೆ. ನವಲಿ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಬದ್ದವಾಗಿದೆ. ಬಜೆಟ್ ನಂತರ ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು” ಎಂದು ಹೇಳಿದರು.
“ಸಿಂಧನೂರು ತಾಲೂಕು ಸಮೃದ್ಧಿಯಾಗಿದ್ದು, ತಿಮ್ಮಾಪುರು ಏತ ನೀರಾವರಿ ಯೋಜನೆಯಡಿ ಮತ್ತಷ್ಟು ರೈತರ ಕಲ್ಯಾಣವಾಗಲಿದೆ. ಹಿಂದಿನ ಬಿಜೆಪಿ ಸರ್ಕಾರ ಜನರಿಗೆ ಮಾಡಿರುವ ವಂಚನೆಯಿಂದ ಜನರು ಕಾಂಗ್ರೆಸ್ ಪಕ್ಷಕ್ಕೆ ಆರ್ಶೀವಾದ ಮಾಡಿದ್ದಾರೆ. ಜನರಿಗೆ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ, ಬಿಜೆಪಿ ಮಾತು ತಪ್ಪಿದೆ. ಉದ್ಯೋಗ ಕೊಡಲಿಲ್ಲ, ಹಣ ಜಮಾ ಮಾಡಲಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ಜನರನ್ನು ಮೋಸ ಮಾಡಿದೆ. ಕಲ್ಯಾಣ ಕರ್ನಾಟಕ ಹಿಂದುಳಿದಿದೆ ಎಂದು ಕಿವಿಗೆ ಹೂ ಇಡುವ ಕೆಲಸ ಮಾಡಬೇಡಿ. ಕಲ್ಯಾಣ ಕರ್ನಾಟಕ ಸಾಕಷ್ಟು ಅಭಿವೃದ್ದಿಯನ್ನು ಹೊಂದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಜ.28ರಂದು ಜಾಗೃತಿ ಸಮಾವೇಶ
“ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ನೀಡದೇ ಇರುವುದರಿಂದ ರಾಜ್ಯ ಸರ್ಕಾರ ಅಕ್ಕಿ ಬದಲು ಹಣ ನೀಡುವ ಯೋಜನೆ ಜಾರಿಗೊಳಿಸಿದೆ. ಐದು ಬೆರಳು ಸೇರಿ ಮುಷ್ಠಿಯಾದಂತೆ ಐದು ಗ್ಯಾರಂಟಿ ಸೇರಿ ಕೈ ಗ್ಯಾರಂಟಿಯಾಯಿತು. ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಲಾಗಿತ್ತು. ಐದೂ ಗ್ಯಾರೆಂಟಿಗಳನ್ನು ಜಾರಿಗೊಳಿಸಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ” ಎಂದರು.
ವರದಿ : ಹಫೀಜುಲ್ಲ