ಕಳೆದ ಮೂವತ್ತು ವರ್ಷಗಳಿಂದ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ನಡೆಯುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವ ವಿಶ್ವಾಸವಿದ್ದು, ರಾಯಚೂರು ನಗರದ ಹಬ್ನ ಸಭಾಂಗಣದಲ್ಲಿ ಡಿಸೆಂಬರ್ 17 ರಂದು ಮಾದಿಗ ಮುನ್ನಡೆ, ಮಾದಿಗರ ಆತ್ಮಗೌರವ ಜಿಲ್ಲಾ ಸಮಾವೇಶ ಆಯೋಜಿಸಲಾಗಿದೆ ಎಂದು ಸಮಾವೇಶ ಸಂಚಾಲಕ ಎಂ ವಿರೂಪಾಕ್ಷಿ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಿ ಎಸ್ ಯಡಿಯೂರಪ್ಪನವರು ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ರಚಿಸಿದ್ದರು. ನಂತರ ಬಂದ ಸರ್ಕಾರಗಳು ವರದಿಯನ್ನು ಪಡೆದರೂ ಜಾರಿಗೊಳಿಸಲೇ ಇಲ್ಲ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ನಾನೇ ಜಾರಿಗೊಳಿಸುವದಾಗಿ ಹೇಳುತ್ತಲೇ ಬಂಜಾರ ಸಮಾವೇಶದಲ್ಲಿ ಆಯೋಗ ವರದಿಯೇ ಅವೈಜ್ಞಾನಿಕವಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿಯವರು ವರದಿಯೊಂದನ್ನು ಕೇಂದ್ರಕ್ಕೆ ಕಳುಹಿಸಿ ಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿದ್ದರು” ಎಂದು ಹೇಳಿದರು.
“ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೊಳ್ಳಲಿಲ್ಲ. ಇತ್ತೀಚಿಗೆ ಹೈದರಾಬಾದನಲ್ಲಿ ನಡೆದ ವಿಶ್ವರೂಪ ಸಮಾವೇಶದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರು ಒಳಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿದ್ದರು. ಅಲ್ಲದೇ ಈಗಾಗಲೇ ಸಮಿತಿ ರಚಿಸಿ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಶೇ.10ರಷ್ಟು ಮೀಸಲಾತಿ ನೀಡಲು ಹೇಗೆ ನಿರ್ಧರಿಸಿದರೋ ಅದೇ ರೀತಿ ಕಾನೂನಾತ್ಮಕ ಸಮಸ್ಯೆಗಳನ್ನು ನೀಗಿಸಿ ಒಳಮೀಸಲಾತಿ ಜಾರಿಗೆ ಸಂವಿಧಾನ ತಿದ್ದುಪಡಿಯೊಂದಿಗೆ ಜಾರಿಗೊಳಿಸುವ ವಿಶ್ವಾಸವಿದ್ದು, ಮಾದಿಗ ಸಮಾಜ ಮನ್ನಲೆಗೆ ಬರುವ ವಿಶ್ವಾಸವಿದೆ” ಎಂದರು.
“ಕಾರ್ಯಕ್ರಮವನ್ನು ಕೇಂದ್ರ ಮಾಜಿ ಸಚಿವ ರಮೇಶ ಜಿಗಜಿಣಗಿ ಉದ್ಘಾಟಿಸಲಿದ್ದಾರೆ. ಬಳ್ಳಾರಿ, ಹಗರಿಬೊಮ್ಮನಹಳ್ಳಿ ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಿಂದ ಬಿಜೆಪಿ ಮುಖಂಡರುಗಳು ಭಾಗವಹಿಸಲಿದ್ದಾರೆ. ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಸಿ ಯಶಸ್ವಿಗೊಳಿಸಬೇಕು” ಎಂದರು.
“ನಮಗೆ ಮೀಸಲಾತಿ ಹೆಚ್ಚಿಸುವ, ಜಾರಿಗೊಳಿಸುವುದು ಮುಖ್ಯವಾಗಿದೆ. ಇನ್ನೆರಡು ತಿಂಗಳಲ್ಲಿ ಕೇಂದ್ರ ಸರ್ಕಾರದ ಅವಧಿ ಮುಕ್ತಾಯವಾಗಲಿದ್ದು, ಅಷ್ಟರೊಳಗೆ ಒಳಮೀಸಲಾತಿ ಕುರಿತು ಅಂತಿಮ ತೀರ್ಮಾನವಾಗಲಿದೆ. ಸಮುದಾಯ ಜನರಲ್ಲಿ ಜಾಗೃತಿ ಮೂಡಿಸಬೇಕಿರುವುದರಿಂದ ಪ್ರಮುಖರ ಸಮಾವೇಶ ನಡೆಯಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ?ರಾಯಚೂರು | ಸಂಸತ್ ಘಟನೆಯ ಆರೋಪಿ ಎಸ್ಎಫ್ಐನವರೆಂದು ಅಪಪ್ರಚಾರ; ಕಾನೂನು ಕ್ರಮಕ್ಕೆ ಎಸ್ಎಫ್ಐ ಆಗ್ರಹ
ಪಕ್ಷಾತೀತವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಮೀಸಲಾತಿ ಹೋರಾಟ ಸಮಿತಿಗಳ ಮುಖಂಡರುಗಳು, ಸಮಾಜದ ಜನರು ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರವೀಂದ್ರ ಜಲ್ದಾರ, ರೆಡ್ಡಿ ತಿಮ್ಮಪ್ಪ, ಪಿ ಯಲ್ಲಪ್ಪ, ನಗರಸಭೆ ಸದಸ್ಯ ಎನ್ ಕೆ ನಾಗರಾಜ, ತಿಮ್ಮಪ್ಪ ಫಿರಂಗಿ, ಭೀಮಣ್ಣ ಮಂಚಾಲ, ಸುಭಾಷ ಅಸ್ಕಿಹಾಳ, ರಾಘವೇಂದ್ರ ಬೋರೆಡ್ಡಿ, ಶಾಂತಕುಮಾರ ಇದ್ದರು.