ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ 2024ರ ಜನವರಿ 28ರಂದು ಚಿತ್ರದುರ್ಗದ ಬಸವ ಮೂರ್ತಿ ಮಾದಾರ ಚನ್ನಯ್ಯ ಪೀಠದ ಪಕ್ಕದಲ್ಲಿರುವ ಮೈದಾನದಲ್ಲಿ ಶೋಷಿತರ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಹೇಳಿದರು.
ರಾಯಚೂರಿನಲ್ಲಿ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಮೀಸಲಾತಿ ಹಂಚಿಕೆಯಲ್ಲಿ ಶೋಷಿತ ಸಮುದಾಯಗಳಿಗೆ ಉಂಟಾಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಎಚ್ ಕಾಂತರಾಜ ಆಯೋಗದ ವರದಿ ಜಾರಿಗೆ ತರಲು ಸರ್ಕಾರ ಮುಂದಾಗಬೇಕು” ಎಂದು ಆಗ್ರಹಿಸಿದರು.
“ಹಿಂದುಳಿದ ವರ್ಗದ ಆಯೋಗದಿಂದ ಎಚ್ ಕಾಂತರಾಜ್ ಆಯೋಗ ನೀಡಿರುವ ವರದಿ ಜಾರಿಗೆ ವೀರಶೈವ ಲಿಂಗಾಯತರು, ಒಕ್ಕಲಿಗರು ವಿರೋಧಿಸುತ್ತಿದ್ದಾರೆ. ವರದಿಯನ್ನು ಅಂಗೀಕಾರಗೊಳಿಸುವ ಮುನ್ನವೇ ವಿರೋಧಿಸುವ ಮೂಲಕ ಶೋಷಿತ ಸಮೂದಾಯಗಳನ್ನು ವಂಚಿಸುವ ಹುನ್ನಾರಗಳು ಪ್ರಾರಂಭಗೊಂಡಿವೆ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಕಾಂತರಾಜ ಆಯೋಗದ ವರದಿಯನ್ನು ಅಂಗೀಕಾರಗೊಳಿಸಲು ಎಲ್ಲ ಶೋಷಿತ ಸಮುದಾಯಗಳ ಒಕ್ಕೊರಲ ಒತ್ತಾಯವನ್ನು ಮಾಡಲಾಗುತ್ತದೆ” ಎಂದರು.
ಇಂದಿರಾ ಸಹಾನಿ ಪ್ರಕರಣದಲ್ಲಿ ಶೇ.50ರಷ್ಟು ಮೀಸಲಾತಿ ಹೆಚ್ಚಳವಾಗದಂತೆ ಸೂಚಿಸಿದ್ದರೂ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಜಾರಿಗೊಳಿಸಿದೆ. ಆದರೆ ಹಿಂದುಳಿದ ಸಮುದಾಯದ ಜನಸಂಖ್ಯೆಗೆ ಆಧಾರವಾಗಿ ಮೀಸಲಾತಿ ಹಂಚಿಕೆಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೊಳಿಸುವುದಾಗಿ ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಕಾಯ್ದೆ ಅಂಗೀಕರಿಸಲಾಗಿದೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗೂ ಅವಕಾಶ ನೀಡಬೇಕು” ಎಂದು ಒತ್ತಾಯಿಸಿದರು.
“ರಾಜಕೀಯ ಕ್ಷೇತ್ರದಲ್ಲಿಯೂ ಒಳ ಮೀಸಲಾತಿ ಜಾರಿಗೊಳಿಸುವುದು ಸೇರಿದಂತೆ ಶೋಷಿತ ಸಮುದಾಯದ ಐಕ್ಯತೆಗೆ ಹೋರಾಟ ನಡೆಸಲಾಗುತ್ತದೆ. ಸಮಾವೇಶದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯಯ ಸೇರಿದಂತೆ ಶೋಷಿತ ಸಮುದಾಯಗಳ ಮುಖಂಡರು ಭಾಗಿಯಾಗಲಿದ್ದಾರೆ” ಎಂದರು.
ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ ಶಾಂತಪ್ಪ ಮಾತನಾಡಿ, “ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆಯವರು ಜನವರಿ 30 ರಂದು ವರದಿ ನೀಡುವುದಾಗಿ ಹೇಳಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ವರದಿಯನ್ನು ಅಂಗೀಕರಿಸಿ ಕಾಂತರಾಜ್ ಆಯೋಗ ವರದಿಯನ್ನು ಬಹಿರಂಗಪಡಿಸಬೇಕು. ವರದಿ ಜಾರಿಗೊಳ್ಳುವ ಮುನ್ನವೇ ವಿರೋಧಕ್ಕೆ ಸರ್ಕಾರ ಮಣಿಯಬಾರದು” ಎಂದರು.
“ಶೋಷಿತ ಸಮುದಾಯದ ಗಣತಿಗೆ ಸರ್ಕಾರ 165 ಕೋಟಿ ರೂ. ಖರ್ಚು ಮಾಡಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚಿಸಿದ್ದ ಆಯೊಗ ವರದಿ ಹಿಂದಿನ ಯಾವುದೇ ಸರ್ಕಾರಗಳೂ ಅಂಗೀಕರಿಸಿಲ್ಲ. ಹಿಂದುಳಿದವರಿಗೆ ಮೀಸಲಾತಿ ಹಂಚಿಕೆ ವಿಷಯದಲ್ಲಿ ವ್ಯವಸ್ಥಿತ ರಾಜಕೀಯ ನಡೆಯುತ್ತಲೇ ಬಂದಿದೆ. ಕಾಂತರಾಜ ವರದಿಗೂ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಆದರೆ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳಬೇಕು: ಉಪವಿಭಾಗಾಧಿಕಾರಿ ಎಂ ಕಾರ್ತಿಕ್
ಚಿತ್ರದುರ್ಗದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಶೋಷಿತ ಸಮೂದಾಯ ಎಲ್ಲ ಜನರೂ ಭಾಗವಹಿಸಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯ ಮುಖಂಡರುಗಳಾದ ಅಣ್ಣಗೆರೆ ಎಂ ಈರಣ್ಣ, ನಾಗರಾಜ, ಬೀರಪ್ಪ ಕಡಿದಿನ್ನಿ, ಮಹ್ಮದ ಶಾಲಂ, ಕೆ.ಬಸವಂತಪ್ಪ, ಹನುಮಂತಪ್ಪ ಯಾದವ ಇದ್ದರು.
ವರದಿ : ಹಫೀಜುಲ್ಲ