ರಾಯಚೂರು ಜಿಲ್ಲೆ ಅನೈತಿಕ, ಅಕ್ರಮ, ಭ್ರಷ್ಟಾಚಾರದ ತಾಣವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸೋಮವಾರ ಜನತಾ ದರ್ಶನ ಮಾಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಆದರೆ ಅಕ್ರಮಗಳಿಗೆ ಸರ್ಕಾರ ಕಡಿವಾಣ ಹಾಕದೇ ಇದ್ದರೆ ಅಣುಕು ಶವಯಾತ್ರೆ ಮಾಡುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವಿರೂಪಾಕ್ಷಿ ಹೇಳಿದರು.
ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜನತಾ ದರ್ಶನ, ಗ್ರಾಮ ವಾಸ್ತವ್ಯದಂತಹ ಯೋಜನೆ ರೂಪಿಸಿ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿರುವ ಇತಿಹಾಸವಿದೆ. ಉಸ್ತುವಾರಿ ಸಚಿವರು ಕೇವಲ ಸಭೆಗಳಿಗೆ ಮಾತ್ರ ಸೀಮಿತವಾಗಿದ್ದು ಈಗ ಜನತಾದರ್ಶನ ನಡೆಸುವುದಾಗಿ ಹೇಳುತ್ತಿದ್ದಾರೆ” ಎಂದು ಟೀಕಿಸಿದರು.
“ಜಿಲ್ಲೆಯಲ್ಲಿ ಇಸ್ಪೀಟ್, ಮಟ್ಕಾ, ನಶೆ ವಸ್ತುಗಳ ಮಾರಾಟ, ಅಕ್ರಮ ಮದ್ಯ, ಮರಳು ದಂಧೆ, ಅಕ್ಕಿ ಸಾಗಣೆ ಧಂಧೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಕೇವಲ ಜನತಾ ದರ್ಶನ ಮೂಲಕ ಕೇವಲ ಅರ್ಜಿ ಸ್ವೀಕರಿಸಲು ಮಾತ್ರ ಕಾರ್ಯಕ್ರಮ ಸೀಮಿತವಾಗದೇ ಗಂಭೀರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗೆ ಜನರಿಂದ ಸಮಸ್ಯೆ ಆಲಿಸಲು ಕಾಯದೆ ಅಧಿಕಾರಿಗಳಿಗೆ ಆದೇಶ ನೀಡಿದರೆ ಅಕ್ರಮ ನಿಲ್ಲಲು ಸಾಧ್ಯವಿದೆ. ಅನೈತಿಕ ಚಟುವಟಿಕೆಗಳು ನಿಯಂತ್ರಣವಿಲ್ಲದೇ ನಡೆಯುತ್ತಿರುವಾಗ ಉಸ್ತುವಾರಿ ಸಚಿವರು ಸಭೆ, ಸಮಾರಂಭಗಳಿಗೆ ಸೀಮಿತವಾದೇ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕೆಸಲವಾಗಬೇಕಿದೆ” ಎಂದು ಆಗ್ರಹಿಸಿದರು.
“ಮಕ್ಕಳು ತಿನ್ನುವ ಚಾಕಲೇಟ್‌ನಲ್ಲಿ ಗಾಂಜಾ ಮಾರಾಟ ಮಾಡುವುದು ನಡೆಯುತ್ತಿದೆ. ನಗರದಲ್ಲಿ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಎರಡು ದಿನಕ್ಕೊಮ್ಮೆ ನೀರು ಬರುತ್ತಿದೆ. ರಸ್ತೆಗಳು ಹಾಳಾಗಿ ಹೋಗಿವೆ. 24 ಗಂಟೆ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಯೋಜನೆಗಳು ವಿಫಲವಾಗಿವೆ. ಕನಿಷ್ಟ ಸಮಸ್ಯೆಗಳಿಗೂ ಆಡಳಿತದಿಂದ ಪರಿಹಾರ ದೊರೆಯದೆ ಇರುವಾಗ ಜನತಾ ದರ್ಶನ ಕಾರ್ಯಕ್ರಮದ ಮೇಲೆ ಜನತೆಗೆ ನಂಬಿಕೆ ಇಲ್ಲದಂತಾಗಿದೆ” ಎಂದರು.
“ಎನ್ ಎಸ್ ಬೋಸರಾಜು ಫೌಂಡೇಷನ್ ಹೆಸರಿನಲ್ಲಿ ಇತ್ತೀಚೆಗೆ ನಗರದ ಸ್ವಚ್ಚತೆ ಹೆಸರಿನಲ್ಲಿ ನಾಟಕೀಯ ಬೆಳವಣಿಗೆ ನಡೆಯಿತು. 30 ಟ್ರಾಕ್ಟರ್‌ಗಳು, ಎರಡು ಜೆಸಿಬಿಗಳನ್ನು ನಗರಸಭೆ ಖರೀದಿಸಿದೆ. ಆದರೂ ಬೋಸರಾಜು ಫೌಂಡೇಷನ್‌ನಿಂದ 250 ಟ್ರಾಕ್ಟರ್‌ಗಳಿಗೆ ನಗರಸಭೆ ಡೀಸೆಲ್ ವೆಚ್ಚ ಮಾಡಿದೆ. ಪ್ರತಿ ತಿಂಗಳು ನಗರಸಭೆ 60 ರಿಂದ 70 ಲಕ್ಷ ರೂ ವೆಚ್ಚ ಮಾಡುತ್ತಿದೆ. ಪೌರಕಾರ್ಮಿಕರು, ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡಿದೆ. ಸ್ವಚ್ಛತೆ ಹೆಸರಿನಲ್ಲಿ ಹಣ ವೆಚ್ಚ ಮಾಡಿ ಸ್ವಚ್ಛತಾ ಕಾರ್ಯ ನಿಲ್ಲಿಸಲಾಗಿದೆ” ಎಂದು ಆರೋಪಿಸಿದರು.
“ಸ್ಲಂ ಬಡಾವಣೆಗಳ ನಿವಾಸಿಗಳ ಮನೆ ನಿರ್ಮಾಣದ ಹೆಸರಿನಲ್ಲಿ ಭಾರೀ ಅಕ್ರಮ ನಡೆದಿದೆ. ಫಲಾನುಭವಿಗಳಿಂದ ಹಣ, ಕಟ್ಟಡ ಸಾಮಾಗ್ರಿ ತರುವಂತೆ ಒತ್ತಾಯಿಸಲಾಗುತ್ತಿದೆ. ಏಗನೂರು ಬಳಿ 2400 ಜಿ ಪ್ಲಸ್ ಮನೆ ನಿರ್ಮಾಣ ಮಾಡುವುದಾಗಿ ಸವಳು ಭೂಮಿ ಆಯ್ಕೆ ಮಾಡಲಾಗಿದೆ. ಅಲ್ಲಿ ಮನೆ ಕಟ್ಟಲು ಸಾಧ್ಯವೇ ಇಲ್ಲದ ಸ್ಥಿತಿಯಿದೆ. ಭೂಮಿ ಕುಸಿಯುತ್ತಿದ್ದು, ಮೂರು ಸಾವಿರ ಮನೆಗಳನ್ನು ಎಂ ಈರಣ್ಣ ಎಂಬ ಗುತ್ತಿಗೆದಾರರನಿಗೆ ವಹಿಸಲಾಗಿತ್ತು. ಅವರು ಉಪಗುತ್ತಿಗೆ ನೀಡಿ ಕಳಪೆ ಮನೆ ನಿರ್ಮಾಣಕ್ಕೆ ಕಾರಣವಾಗಿದೆ” ಎಂದರು.
“ಇದೀಗ ಮತ್ತೆ 2700 ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಗುತ್ತಿಗೆದಾರರು ಫಲಾನುಭವಿಗಳು ಸಿಮೆಂಟ್ ತರುವಂತೆ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲ ಘೋ಼ಷಣೆ ಮಾಡಲಾಗಿದೆ. ಆದರೆ ಪರಿಹಾರ ಕಾರ್ಯಗಳು ಪ್ರಾರಂಭವಾಗಿಲ್ಲ. ಸಚಿವರು ಸಮಸ್ಯೆ ಕೇಳುತ್ತಿದಾರೆ. ಆದರೆ ಪರಿಹಾರವೇ ಇಲ್ಲದಂತಾಗಿದೆ. ಜನತಾ ದರ್ಶನದಲ್ಲಿ ಜನರು ನೀಡುವ ದೂರುಗಳನ್ನು 15 ದಿನದಲ್ಲಿ ಇತ್ಯರ್ಥಪಡಿಸಬೇಕು. ಇಲ್ಲದೇ ಹೊದಲ್ಲಿ ಸಿಎಂ, ಡಿಸಿಎಂ, ಉಸ್ತುವಾರಿ ಸಚಿವರ ಅಣುಕು ಶವಯಾತ್ರೆ ಮಾಡಲಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭದ್ರಾ ಬಲದಂಡೆ ನಾಲೆಗೆ ನೀರು ಹರಿಸಲು ಆಗ್ರಹ
ಜೆಡಿಎಸ್ ರಾಜ್ಯಾಧ್ಯಕ್ಷ ಮಹಾಂತೇಶ ಪಾಟೀಲ್ ಮಾತನಾಡಿ, “ಜೆಡಿಎಸ್ ವರಿಷ್ಠರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ. ಅದನ್ನು ಜಿಲ್ಲಾ ಮತ್ತು ತಾಲೂಕು ಸಮಿತಿಗಳು ಗೌರವಿಸಬೇಕಿದೆ. ಪಕ್ಷವನ್ನು ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಜಾತ್ಯತೀತತೆ ಎಲ್ಲಿಯೂ ಹೋಗಲ್ಲ. ಪಕ್ಷ ಬದ್ಧತೆಯಿಂದ ಕಾರ್ಯನಿರ್ವಹಿಸಲಿದೆ” ಎಂದರು.
ಈ ಸಂದರ್ಭದಲ್ಲಿ ಯೂಸೂಫ್ ಖಾನ್, ಎನ್ ಶಿವಶಂಕರ ವಕೀಲ, ನರಸಿಂಹನಾಯಕ, ರಾಮಕೃಷ್ಣ ಇದ್ದರು.
ಸಿಟಿಜನ್ ಜರ್ನಲಿಸ್ಟ್ : ಹಫೀಜುಲ್ಲ