ರಾಯಚೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಕರಡು ಅಧಿಸೂಚನೆಯಲ್ಲಿ ಬಿಸಿಎಂ-ಬಿ ( 3 B))ಪ್ರ ವರ್ಗಕ್ಕೆ ಒಂದೂ ಸ್ಥಾನ ಮೀಸಲಿಡದಿರುವುದು ಸಂವಿಧಾನಬದ್ಧವಲ್ಲ, ತಕ್ಷಣ ಸರಿಪಡಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿಯಾಪುರ ಆಗ್ರಹಿಸಿದರು
ಅವರು ಪಟ್ಟಣದ ಖೇಣೆದ್ ಅವರ ಕಾರ್ಯಾಲಯದಲ್ಲಿ ಶುಕ್ರವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ವೀರಶೈವ-ಲಿಂಗಾಯತ ಸಮಾಜಕ್ಕೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಜಿಲ್ಲೆಯ ಒಟ್ಟು 39 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಬೇಕಿತ್ತು. ಆದರೆ ಪ್ರಕಟಿತ ಪಟ್ಟಿಯಲ್ಲಿ ವೀರಶೈವ-ಲಿಂಗಾಯತ ಸಮುದಾಯ ಬರುವ ಬಿಸಿಎಂ-ಬಿ ಪ್ರವರ್ಗಕ್ಕೆ ಒಂದೂ ಕ್ಷೇತ್ರ ನೀಡಿಲ್ಲ. ಈ ಬಗ್ಗೆ ಈಗಾಗಲೇ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಸ್ಥಳೀಯ ಸ್ವ-ಸರ್ಕಾರ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು. ಒಂದು ವರ್ಗವನ್ನು ಸಂಪೂರ್ಣವಾಗಿ ರಾಜಕೀಯ ಪ್ರಕ್ರಿಯೆಯಿಂದ ಹೊರಗಿಡುವುದು ಅದರ ರಾಜಕೀಯ ಮತ್ತು ನಾಗರಿಕ ಹಕ್ಕುಗಳ ದಮನವಿದ್ದಂತೆ. ಇದು ಕೇವಲ ಒಂದು ಸಮುದಾಯದ ಪ್ರಶ್ನೆಯಲ್ಲ, ಪ್ರಜಾಪ್ರಭುತ್ವದ ತಳಹದಿಯನ್ನೇ ದುರ್ಬಲಗೊಳಿಸುವ ಪ್ರಯತ್ನ ಎಂದು ಅವರು ಹೇಳಿದರು.
ರೋಸ್ಟರ್ ಪದ್ಧತಿಯ ಉದ್ದೇಶವೇ ಕಾಲಕಾಲಕ್ಕೆ ಎಲ್ಲಾ ವರ್ಗಗಳಿಗೂ ಅವಕಾಶ ಕಲ್ಪಿಸುವುದು. ಹಿಂದಿನ ಚುನಾವಣೆಗಳಲ್ಲಿ ಬಿಸಿಎಂ-ಬಿ ಗೆ ಮೀಸಲಾಗಿದ್ದ ಸ್ಥಾನಗಳನ್ನು, ಪ್ರಸ್ತುತ ರೋಸ್ಟರ್ ಚಕ್ರವನ್ನು ಪರಿಗಣಿಸದೆ ಏಕಾಏಕಿ ಪ್ರವರ್ಗವನ್ನು ಕೈಬಿಟ್ಟಿರುವುದು ರೋಸ್ಟರ್ ನೀತಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಾಟೀಲ್ ಆರೋಪಿಸಿದರು.
ವೀರಶೈವ-ಲಿಂಗಾಯತ ಸಮುದಾಯ ರಾಯಚೂರು ಜಿಲ್ಲೆಯ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಅಭಿವೃದ್ಧಿಯಲ್ಲಿ ಐತಿಹಾಸಿಕವಾಗಿ ಮಹತ್ವದ ಪಾತ್ರ ವಹಿಸಿದೆ. ಇಂತಹ ಸಮುದಾಯದ ಪ್ರಾತಿನಿಧ್ಯವನ್ನು ಯಾವುದೇ ಸಮರ್ಥನೀಯ ಕಾರಣವಿಲ್ಲದೆ ನಿರಾಕರಿಸುವುದು ತಾರತಮ್ಯ ಎಂದರು. ಕರಡು ಅಧಿಸೂಚನೆಯನ್ನು ಪರಿಷ್ಕರಿಸಿ ನ್ಯಾಯ ಒದಗಿಸದಿದ್ದರೆ, ಮುಂದಿನ ದಿನಗಳಲ್ಲಿ ಕಾನೂನು ಮೂಲಕ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರಿನಲ್ಲಿ ನಿಲ್ಲದ ರೈತರ ಆತ್ಮಹತ್ಯೆ ಸರಣಿ, ಪರಿಹಾರ ವಿತರಣೆಯ ಅಂಕಿ-ಅಂಶಗಳಲ್ಲೇ ಗೊಂದಲ!
ಈ ಸಂದರ್ಭದಲ್ಲಿ ಉದ್ಯಮಿ ಬಾನುಪ್ರಕಾಶ್ ಖೇಣೆದ್, ಪ್ರಕಾಶ್ ಪಾಟೀಲ್ ಅಮರಪುರ, ಪ್ರವೀಣ್ ಕುಮಾರ, ಶರಣಬಸವ ರಾಮದುರ್ಗ ಇದ್ದರು.




