ಕೃಷಿ ಪ್ರಧಾನ ಜಿಲ್ಲೆಯೆಂಬ ಹೆಗ್ಗಳಿಕೆ ಹೊಂದಿರುವ ರಾಯಚೂರಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿರುವುದು ಕೃಷಿ ವಲಯ ಎದುರಿಸುತ್ತಿರುವ ಬಿಕ್ಕಟ್ಟಿನ ಗಂಭೀರತೆಯನ್ನು ಎತ್ತಿತೋರಿಸಿದೆ. 2023-24ರಿಂದ 2025-26ನೇ ಸಾಲಿನವರೆಗೆ ಜಿಲ್ಲೆಯಲ್ಲಿ ಒಟ್ಟು 55 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದೆ.
ಈ ಪೈಕಿ 42 ಪ್ರಕರಣಗಳನ್ನು ಪರಿಹಾರಕ್ಕೆ ಅರ್ಹವೆಂದು ಗುರುತಿಸಲಾಗಿದೆ. ಮತ್ತೊಂದೆಡೆ, ಪರಿಹಾರ ವಿತರಣೆಯ ಅಂಕಿ-ಅಂಶಗಳಲ್ಲಿ ವ್ಯತ್ಯಾಸ ಕಂಡುಬರುತ್ತಿರುವುದು, ತಿರಸ್ಕೃತ ಪ್ರಕರಣಗಳ ಹಿನ್ನೆಲೆ ಹಾಗೂ ಅರ್ಹ ಕುಟುಂಬಗಳಿಗೆ ನೆರವು ತಲುಪಿದೆಯೇ ಎಂಬ ಪ್ರಶ್ನೆಗಳು ಮಹತ್ವ ಪಡೆದುಕೊಂಡಿವೆ.
ಕೃಷಿ ನಷ್ಟ, ಸಾಲದ ಹೊರೆ ಮತ್ತು ಆರ್ಥಿಕ ಸಂಕಷ್ಟದಿಂದ ರೈತ ಕುಟುಂಬಗಳು ನಲುಗುತ್ತಿರುವ ಸಂದರ್ಭದಲ್ಲಿ, ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯನ್ನು ದಾಖಲಿಸುವುದಷ್ಟೇ ಆಡಳಿತದ ಜವಾಬ್ದಾರಿಯಲ್ಲ. ಇಂತಹ ದುರಂತಗಳಿಗೆ ಕಾರಣವಾಗುತ್ತಿರುವ ಸಮಸ್ಯೆಗಳನ್ನು ಗುರುತಿಸಿ, ರೈತ ಕುಟುಂಬಗಳಿಗೆ ಸಕಾಲದಲ್ಲಿ ಪರಿಹಾರ ಮತ್ತು ಶಾಶ್ವತ ನೆರವು ಒದಗಿಸುವುದು ಅತ್ಯಗತ್ಯವಾಗಿದೆ.
ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, 2023-24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 15 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 13 ಪ್ರಕರಣಗಳು ಪರಿಹಾರಕ್ಕೆ ಅರ್ಹವೆಂದು ಗುರುತಿಸಲ್ಪಟ್ಟಿದ್ದು, ಎರಡು ಪ್ರಕರಣಗಳು ತಿರಸ್ಕೃತವಾಗಿವೆ. 2024-25ನೇ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಈ ಪೈಕಿ 19 ಪ್ರಕರಣಗಳು ಅರ್ಹವೆಂದು ಪರಿಗಣಿಸಲ್ಪಟ್ಟರೆ, ನಾಲ್ಕು ಪ್ರಕರಣಗಳು ತಿರಸ್ಕೃತವಾಗಿವೆ. 2025-26ನೇ ಸಾಲಿನಲ್ಲಿ 17 ಪ್ರಕರಣಗಳು ವರದಿಯಾಗಿದ್ದು, 10 ಪ್ರಕರಣಗಳು ಅರ್ಹವೆಂದು ಗುರುತಿಸಲ್ಪಟ್ಟಿವೆ. ಉಳಿದ ಏಳು ಪ್ರಕರಣಗಳು ತಿರಸ್ಕೃತವಾಗಿವೆ.
ಮೂರು ವರ್ಷಗಳಲ್ಲಿ ಒಟ್ಟು 55 ಪ್ರಕರಣಗಳು ವರದಿಯಾಗಿದ್ದು, 42 ಪ್ರಕರಣಗಳು ಅರ್ಹ ಹಾಗೂ 13 ಪ್ರಕರಣಗಳು ತಿರಸ್ಕೃತವಾಗಿವೆ. ವಿಶೇಷವಾಗಿ 2025-26ನೇ ಸಾಲಿನಲ್ಲಿ ವರದಿಯಾದ 17 ಪ್ರಕರಣಗಳಲ್ಲಿ ಏಳು ಪ್ರಕರಣಗಳು ತಿರಸ್ಕೃತವಾಗಿರುವುದು, ಪ್ರಕರಣಗಳ ಪರಿಶೀಲನೆ ಮತ್ತು ಅರ್ಹತೆ ನಿರ್ಧರಿಸುವ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಸ್ಪಷ್ಟತೆ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ.
ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದ ಪರಿಹಾರ ವಿತರಣೆಯ ವಿವರಗಳ ಪ್ರಕಾರ, 2023-24ನೇ ಸಾಲಿನಲ್ಲಿ 17 ಪ್ರಕರಣಗಳಿಗೆ ₹85 ಲಕ್ಷ ಹಾಗೂ 2024-25ನೇ ಸಾಲಿನಲ್ಲಿ 17 ಪ್ರಕರಣಗಳಿಗೆ ₹85 ಲಕ್ಷ ವಿತರಿಸಲಾಗಿದೆ ಎಂದು ತಿಳಿಸಲಾಗಿದೆ. 2025-26ನೇ ಸಾಲಿನಲ್ಲಿ ಈವರೆಗೆ 10 ಪ್ರಕರಣಗಳಿಗೆ ₹50 ಲಕ್ಷ ಪರಿಹಾರ ನೀಡಿರುವುದಾಗಿ ಅಂಕಿ-ಅಂಶಗಳು ಉಲ್ಲೇಖಿಸುತ್ತವೆ. ಈ ವಿವರಗಳನ್ನು ಒಟ್ಟುಗೂಡಿಸಿದರೆ ಮೂರು ವರ್ಷಗಳಲ್ಲಿ 44 ಪ್ರಕರಣಗಳಿಗೆ ₹2.20 ಕೋಟಿ ಪರಿಹಾರ ವಿತರಿಸಿದಂತಾಗುತ್ತದೆ. ಪ್ರತಿ ಪ್ರಕರಣಕ್ಕೆ ₹5 ಲಕ್ಷದಂತೆ ಲೆಕ್ಕ ಹಾಕಿದಾಗ ಈ ಮೊತ್ತ ಸರಿಹೊಂದುತ್ತದೆ.
ಪ್ರಕರಣಗಳ ಅರ್ಹತೆ ಕುರಿತ ಅಂಕಿ-ಅಂಶಗಳ ಪ್ರಕಾರ ಮೂರು ವರ್ಷಗಳಲ್ಲಿ 42 ಪ್ರಕರಣಗಳು ಮಾತ್ರ ಅರ್ಹವೆಂದು ಗುರುತಿಸಲ್ಪಟ್ಟಿವೆ. ಪರಿಹಾರ ವಿತರಣೆಯ ವಿವರಗಳಲ್ಲಿ 44 ಪ್ರಕರಣಗಳು ದಾಖಲಾಗಿರುವುದರಿಂದ, ಈ ವ್ಯತ್ಯಾಸಕ್ಕೆ ಕಾರಣವೇನು ಎಂಬ ಪ್ರಶ್ನೆ ಎದುರಾಗಿದೆ. ಹಿಂದಿನ ಸಾಲಿನ ಪ್ರಕರಣಗಳಿಗೆ ಪರಿಹಾರ ವಿತರಿಸಲಾಗಿದೆಯೇ ಅಥವಾ ಅಂಕಿ-ಅಂಶಗಳ ದಾಖಲಾತಿಯಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನು ಸಂಬಂಧಪಟ್ಟ ಇಲಾಖೆಯು ಸ್ಪಷ್ಟಪಡಿಸಬೇಕಿದೆ.
ಪರಿಹಾರ ವಿತರಣೆಯ ಸಂಖ್ಯೆಯನ್ನು ಮಾತ್ರ ಮುಂದಿಟ್ಟುಕೊಳ್ಳದೆ, ಅರ್ಹ ಕುಟುಂಬಗಳಿಗೆ ನಿಜವಾಗಿಯೂ ಹಣ ತಲುಪಿದೆಯೇ, ಯಾವ ಅವಧಿಯಲ್ಲಿ ವಿತರಿಸಲಾಗಿದೆ ಹಾಗೂ ಇನ್ನೂ ಎಷ್ಟು ಕುಟುಂಬಗಳು ನೆರವಿಗಾಗಿ ಕಾಯುತ್ತಿವೆ ಎಂಬುದರ ಬಗ್ಗೆಯೂ ಪಾರದರ್ಶಕ ಮಾಹಿತಿ ಬಹಿರಂಗಪಡಿಸುವ ಅಗತ್ಯವಿದೆ.
ರೈತ ಮುಖಂಡ ಶಿವಪುತ್ರ ಜಾಗೀರ ನಂದಿಹಾಳ ಅವರು ಮಾತನಾಡಿ, “ಸಾಲದ ಹೊರೆ ಮತ್ತು ಬ್ಯಾಂಕ್ ಸಿಬ್ಬಂದಿಯ ಕಿರುಕುಳದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳು ವರದಿಗಳನ್ನು ತಿರುಚಿ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಾಖಲಿಸುತ್ತಾರೆ” ಎಂದು ಆರೋಪಿಸಿದರು.
“ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ಸರ್ಕಾರಗಳು ₹20 ಲಕ್ಷ ಪರಿಹಾರ ನೀಡುತ್ತವೆ. ಆದರೆ, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಅತ್ಯಲ್ಪ ಪರಿಹಾರ ನೀಡಲಾಗುತ್ತದೆ ಎಂಬುದು ರೈತರ ಸ್ಥಿತಿಯ ಬಗ್ಗೆ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಆತ್ಮಹತ್ಯೆ ಪ್ರಕರಣಗಳ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಸಾಲದ ಹೊರೆ, ಬ್ಯಾಂಕ್ ವ್ಯವಹಾರಗಳು ಮತ್ತು ಕೃಷಿ ನಷ್ಟದಂತಹ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಯಾವುದೇ ಕುಟುಂಬವು ಅರ್ಹ ಪರಿಹಾರದಿಂದ ವಂಚಿತವಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ರೈತ ಸಂಘಟನೆಗಳ ಪ್ರಮುಖ ಬೇಡಿಕೆಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ಸದಸ್ಯರು, ಸಾಲ ತೀರಿಸಲಾಗದ ಪರಿಸ್ಥಿತಿ ಮತ್ತು ಬ್ಯಾಂಕ್ ಸಿಬ್ಬಂದಿಯ ಕಿರುಕುಳದಿಂದ ತಮ್ಮ ಮನೆಯವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಸರ್ಕಾರದಿಂದ ದೊರೆಯಬೇಕಾದ ಪರಿಹಾರವೂ ವಿಳಂಬವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರೈತ ಮೃತಪಟ್ಟಾಗ ಪ್ರತಿಭಟನೆ ನಡೆಸಿದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಾತ್ಕಾಲಿಕ ಭರವಸೆಗಳನ್ನು ನೀಡುತ್ತಾರೆ. ಆದರೆ ಅಂತ್ಯಕ್ರಿಯೆ ಮುಗಿದ ಬಳಿಕ ಕುಟುಂಬದ ಸಂಕಷ್ಟಗಳನ್ನು ವಿಚಾರಿಸುವವರೇ ಇರುವುದಿಲ್ಲ. ರೈತನ ಸಾವಿನೊಂದಿಗೆ ಕುಟುಂಬದ ಸಮಸ್ಯೆಗಳು ಮುಗಿಯುವುದಿಲ್ಲ. ಬದಲಾಗಿ, ಸಾಲದ ಹೊರೆ, ಮಕ್ಕಳ ಶಿಕ್ಷಣ, ಕುಟುಂಬದ ನಿರ್ವಹಣೆ ಮತ್ತು ಮುಂದಿನ ಜೀವನದ ಅನಿಶ್ಚಿತತೆ ಇನ್ನಷ್ಟು ತೀವ್ರವಾಗುತ್ತದೆ. ಇಂತಹ ಕುಟುಂಬಗಳಿಗೆ ಪರಿಹಾರದ ಜೊತೆಗೆ ನಿರಂತರ ಆರ್ಥಿಕ ಹಾಗೂ ಸಾಮಾಜಿಕ ನೆರವು ಒದಗಿಸುವ ವ್ಯವಸ್ಥೆ ರೂಪುಗೊಳ್ಳಬೇಕಿದೆ.
ಮಳೆಯ ಅನಿಶ್ಚಿತತೆ, ಬರಗಾಲ, ಬೆಳೆ ನಷ್ಟ, ಕೃಷಿ ಉತ್ಪಾದನಾ ವೆಚ್ಚದ ಹೆಚ್ಚಳ, ಕೃಷಿ ಸಾಲದ ಹೊರೆ ಮತ್ತು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯದಿರುವುದು ರೈತರು ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ. ಬೀಜ, ರಸಗೊಬ್ಬರ, ಕೀಟನಾಶಕ, ಕೂಲಿ ಮತ್ತು ನೀರಾವರಿ ವೆಚ್ಚಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಗದಿದ್ದರೆ ರೈತರು ಸಾಲದ ಸುಳಿಗೆ ಸಿಲುಕುವ ಅಪಾಯ ಹೆಚ್ಚುತ್ತದೆ.
ಬೆಳೆ ವಿಮೆ ಮತ್ತು ಬೆಳೆ ನಷ್ಟದ ಪರಿಹಾರ ಸಕಾಲದಲ್ಲಿ ದೊರೆಯದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ. ಕೃಷಿ ಸಾಲ ಮರುಪಾವತಿಗೆ ಸಮಯಾವಕಾಶ ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ತುರ್ತು ನೆರವು ದೊರೆಯದಿದ್ದರೆ, ಕುಟುಂಬಗಳು ತೀವ್ರ ಆರ್ಥಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. ರೈತರು ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡು ನಿರಂತರವಾಗಿ ದುಡಿಯುತ್ತಿದ್ದರೂ, ಪ್ರಕೃತಿಯ ಅನಿಶ್ಚಿತತೆ ಮತ್ತು ಮಾರುಕಟ್ಟೆಯ ಏರಿಳಿತಗಳ ನಡುವೆ ಅವರ ಆದಾಯಕ್ಕೆ ಭದ್ರತೆ ಇಲ್ಲದಿರುವುದು ಮೂಲ ಸಮಸ್ಯೆಯಾಗಿದೆ.
ಅರ್ಹ ಕುಟುಂಬಗಳಿಗೆ ನೆರವು ತಲುಪಿದೆಯೇ?
ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಅರ್ಹತೆ ನಿರ್ಧರಿಸುವ ಮಾನದಂಡಗಳು, ತನಿಖೆಯ ಪ್ರಕ್ರಿಯೆ ಮತ್ತು ಪರಿಹಾರ ವಿತರಣೆಯ ಸ್ಥಿತಿಗತಿಗಳ ಕುರಿತು ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ದೊರೆಯಬೇಕಿದೆ. ಅರ್ಹವೆಂದು ಗುರುತಿಸಲ್ಪಟ್ಟ ಕುಟುಂಬಗಳಿಗೆ ಪರಿಹಾರದ ಸಂಪೂರ್ಣ ಮೊತ್ತ ತಲುಪಿದೆಯೇ? ಪರಿಹಾರಕ್ಕಾಗಿ ಕಾಯುತ್ತಿರುವ ಕುಟುಂಬಗಳು ಎಷ್ಟು? ತಿರಸ್ಕೃತ ಪ್ರಕರಣಗಳ ಮರುಪರಿಶೀಲನೆ ನಡೆದಿದೆಯೇ? ಪರಿಹಾರ ವಿತರಣೆಯ ಅಂಕಿ-ಅಂಶಗಳಲ್ಲಿ ಕಂಡುಬರುವ ವ್ಯತ್ಯಾಸಕ್ಕೆ ಕಾರಣವೇನು? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರಿಸಬೇಕಿದೆ.
ತಿರಸ್ಕೃತ ಪ್ರಕರಣಗಳ ಕುಟುಂಬಗಳಿಗೆ ತಮ್ಮ ವಾದ ಮಂಡಿಸಲು ಅವಕಾಶ ಕಲ್ಪಿಸುವುದು ಮತ್ತು ಅಗತ್ಯವಿದ್ದಲ್ಲಿ ಮರುಪರಿಶೀಲನೆ ನಡೆಸುವುದು ನ್ಯಾಯಸಮ್ಮತ ಕ್ರಮವಾಗಲಿದೆ. ಪರಿಹಾರ ವಿತರಣೆಯ ವಿವರಗಳನ್ನು ವರ್ಷವಾರು ಪ್ರಕಟಿಸುವುದರಿಂದ ಆಡಳಿತದ ಪಾರದರ್ಶಕತೆ ಹೆಚ್ಚುವುದರ ಜೊತೆಗೆ, ಸಂತ್ರಸ್ತ ಕುಟುಂಬಗಳಿಗೂ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ.
ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ನೀಡುವುದು ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ನೆರವು ಒದಗಿಸುವ ಕ್ರಮವಾಗಿದೆ. ಆದರೆ, ಪರಿಹಾರ ವಿತರಣೆಯೊಂದರಿಂದಲೇ ಕೃಷಿ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.
ಬೆಳೆಗಳಿಗೆ ನ್ಯಾಯಯುತ ಬೆಲೆ ಖಾತರಿಪಡಿಸುವುದು, ಬೆಳೆ ವಿಮೆ ಮತ್ತು ನಷ್ಟ ಪರಿಹಾರವನ್ನು ವಿಳಂಬವಿಲ್ಲದೆ ವಿತರಿಸುವುದು, ಸಾಲದ ಒತ್ತಡದಲ್ಲಿರುವ ರೈತರಿಗೆ ಸೂಕ್ತ ನೆರವು ನೀಡುವುದು, ನೀರಾವರಿ ಸೌಲಭ್ಯಗಳನ್ನು ಬಲಪಡಿಸುವುದು ಹಾಗೂ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ರೈತರ ಸಂಕಷ್ಟದ ಆರಂಭಿಕ ಹಂತದಲ್ಲಿಯೇ ನೆರವು ಒದಗಿಸುವ ವ್ಯವಸ್ಥೆಯೂ ರೂಪುಗೊಳ್ಳಬೇಕು.
ಇದನ್ನೂ ಓದಿ : ಸಿಂಧನೂರು | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ
ಕೃಷಿ ಪ್ರಧಾನ ಜಿಲ್ಲೆಯಾದ ರಾಯಚೂರಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕೇವಲ ಅಂಕಿ-ಅಂಶಗಳಾಗಿ ಉಳಿಯಬಾರದು. ಪ್ರತಿಯೊಂದು ಪ್ರಕರಣದ ಹಿಂದಿರುವ ಕುಟುಂಬದ ನೋವು, ಆರ್ಥಿಕ ಸಂಕಷ್ಟ ಮತ್ತು ಬದುಕಿನ ಅನಿಶ್ಚಿತತೆಯನ್ನು ಆಡಳಿತ ಗಂಭೀರವಾಗಿ ಪರಿಗಣಿಸಬೇಕು. ಪರಿಹಾರ ವಿತರಣೆಯ ಲೆಕ್ಕಾಚಾರದಲ್ಲಿನ ವ್ಯತ್ಯಾಸಕ್ಕೆ ಸ್ಪಷ್ಟನೆ ನೀಡುವುದರ ಜೊತೆಗೆ, ಅರ್ಹ ಕುಟುಂಬಗಳಿಗೆ ಸಕಾಲದಲ್ಲಿ ನೆರವು ತಲುಪಿಸುವುದು ಮತ್ತು ರೈತರ ಬದುಕಿಗೆ ಭದ್ರತೆ ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್



