ಜಿಲ್ಲೆಯಾದ್ಯಂತ ವಿವಿಧೆಡೆ ವೈದ್ಯಕೀಯ ಪದವಿ ಪಡೆಯದೆ ವೈದ್ಯ ವೃತ್ತಿ ನಡೆಸುತ್ತಿದ್ದರೆನ್ನಲಾದ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ್ದು ತಪ್ಪಿತಸ್ಥರಿಗೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್. ಅವರು ತಿಳಿಸಿದರು.
ಮಾನ್ವಿ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ಇಂದು ನಕಲಿ ವೈದ್ಯರ ವಿರುದ್ಧ ದಾಳಿ ನಡೆಸಿದ ವೇಳೆ, ಸ್ಥಳೀಯ ಲಕ್ಷ್ಮೀ ಮೆಡಿಕಲ್ ಶಾಪ್‌ನ ಒಳಭಾಗದಲ್ಲಿ ಕ್ಲಿನಿಕ್ ನಡೆಸುತ್ತಿರುವುದು ಪತ್ತೆಯಾಗಿದೆ. ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದಾಗ, ಸಂಬಂಧಪಟ್ಟ ವ್ಯಕ್ತಿ ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ ಎಂಬುದು ತಿಳಿದುಬಂದಿದೆ ಎನ್ನಲಾಗಿದೆ.
ಸಾರ್ವಜನಿಕರಿಗೆ ಅಧಿಕೃತ ವೈದ್ಯರು ಸೂಚಿಸಿದ ಔಷಧಿಗಳನ್ನು ಮಾರಾಟ ಮಾಡಬೇಕಾದ ಕೆಲವು ಔಷಧಿ ಅಂಗಡಿಗಳ ಮಾಲೀಕರು, ಅಂಗಡಿಯ ಹಿಂಭಾಗ ಅಥವಾ ಒಳಭಾಗದಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ, ವೈದ್ಯಕೀಯ ಪದವಿ ಪಡೆಯದವರಿಂದ ಚಿಕಿತ್ಸೆ ಕೊಡಿಸಲು ಕ್ಲಿನಿಕ್‌ಗಳನ್ನು ನಡೆಸುತ್ತಿರುವುದು ಇಲಾಖೆಯ ದಾಳಿಯ ವೇಳೆ ಪತ್ತೆಯಾಗಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ತಿಳಿಸಿದರು.
ಮುಖ್ಯವಾಗಿ ಔಷಧಿ ಅಂಗಡಿ ತೆರಯಲು ಪರವಾನಿಗೆ ಪಡೆದವರು ಇನ್ನೊಬ್ಬರಿಗೆ ಔಷಧಿ ಅಂಗಡಿಯನ್ನು ನಡೆಸಲು ಅನಧಿಕೃತವಾಗಿ ಪರವಾನಿಗೆ ಕೊಟ್ಟಿರುವುದರಿಂದ ಮಾಲೀಕರು ಖುದ್ದು ಚಿಕಿತ್ಸೆ ನೀಡುತ್ತಿರುವುದು ಕಂಡು ಬರುತ್ತದೆ. ಔಷಧಿ ಅಂಗಡಿಗಳಲ್ಲಿ ನಕಲಿ ವೈದ್ಯರು ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿರುವುದರಿಂದ ಔಷಧಿ ಅಂಗಡಿ ತೆರೆಯಲು ಪರವಾನಿಗೆ ನೀಡುವ ಔಷಧಿ ನಿಯಂತ್ರಣ ಇಲಾಖೆಯು ಖುದ್ದು ಪರಿಶೀಲನೆ ಕೈಗೊಂಡಲ್ಲಿ ಜಿಲ್ಲೆಯಲ್ಲಿ ನಕಲಿ ವೈದ್ಯರು ವೈದ್ಯ ವೃತ್ತಿ ಮಾಡುವುದನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ ಸ್ಥಾನ?
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್ ಕೆ, ತಾಲೂಕಾ ಆರೋಗ್ಯಾಧಿಕಾರಿ ಡಾ ಶರಣಬಸವರಾಜ್ ಸೇರಿದಂತೆ ಉಪಸ್ಥಿತರಿದ್ದರು.





