2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅಥವಾ ಸಾಧ್ಯವಾದರೆ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಲು ಬಯಸಿರುವ ಕೊಲೆ ಪ್ರಕರಣದ ಅಪರಾಧಿ ನಂದನ್ ಲಾಲ್ ರೈ ಅಲಿಯಾಸ್ ಬಬ್ಲೂ ರೈ ಅವರ ಅಪರಾಧ ನಿರ್ಣಯ ಮತ್ತು ಜೀವಾವಧಿ ಶಿಕ್ಷೆಗೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ. ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮತ್ತು ವಿನಯ್ ಕುಮಾರ್ ದ್ವಿವೇದಿ ಅವರನ್ನೊಳಗೊಂಡ ಪೀಠ ಈ ಆದೇಶ ಹೊರಡಿಸಿದೆ.
2025ರ ಏಪ್ರಿಲ್‌ನಲ್ಲಿ ವಾರಣಾಸಿ ನ್ಯಾಯಾಲಯವು ಕೊಲೆ ಪ್ರಕರಣದಲ್ಲಿ ರೈಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಅವರು ಸಲ್ಲಿಸಿರುವ ಮೇಲ್ಮನವಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿದೆ. ಮೇಲ್ಮನವಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ತಮ್ಮನ್ನು ಬಿಡುಗಡೆ ಮಾಡಬೇಕೆಂದು ಕೋರಿ ರೈ ಜಾಮೀನು ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ರೈ ಪರ ವಕೀಲರು, ಕೊಲೆಯಾದ ವ್ಯಕ್ತಿ ರಾಜಕೀಯವಾಗಿ ಸಕ್ರಿಯರಾಗಿದ್ದರು ಮತ್ತು ತಮ್ಮ ಕಕ್ಷಿದಾರರನ್ನು ಕೇವಲ ಅನುಮಾನ ಹಾಗೂ ಊಹೆಗಳ ಆಧಾರದ ಮೇಲೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಾದಿಸಿದರು. ಪ್ರಾಸಿಕ್ಯೂಷನ್‌ನ ಪ್ರಕರಣವು ಬಹುಮಟ್ಟಿಗೆ ಸಾಂದರ್ಭಿಕ ಸಾಕ್ಷ್ಯಗಳನ್ನು ಅವಲಂಬಿಸಿದೆ. ತನಿಖೆಯ ವೇಳೆ ರೈ ಹೆಸರನ್ನು ತಡವಾಗಿ ಬಹಿರಂಗಪಡಿಸಲಾಗಿತ್ತು. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಅನುಮಾನಾಸ್ಪದವಾಗಿದ್ದು, ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿರುವ ಪ್ರಕ್ರಿಯೆಯೂ ಪ್ರಶ್ನಾರ್ಹವಾಗಿದೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ರಾಮಜನ್ಮಭೂಮಿ ಚಳವಳಿಯ ಸಕ್ರಿಯ ಸದಸ್ಯರಾಗಿದ್ದ ಪ್ರಮೋದ್ ಕುಮಾರ್ ನಿಗಮ್ ಅವರ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದವರಲ್ಲಿ ರೈ ಕೂಡ ಒಬ್ಬರಾಗಿದ್ದಾರೆ. ಅಲ್ಲದೆ, ಗ್ಯಾಂಗ್‌ಸ್ಟರ್‌ನಿಂದ ರಾಜಕಾರಣಿಯಾದ ಮುಖ್ತಾರ್ ಅನ್ಸಾರಿ ಅವರೊಂದಿಗೆ ರೈ ಸಂಪರ್ಕ ಹೊಂದಿದ್ದರು ಎಂಬ ವರದಿಗಳೂ ಇವೆ. ಇದೇ ವೇಳೆ, ಶಿಕ್ಷೆಯಾಗುವ ಮೊದಲು ತಾವು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು ಎಂದು ರೈ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. 2027ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅಥವಾ ಸಾಧ್ಯವಾದರೆ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಲು ರೈ ಬಯಸಿದ್ದಾರೆ ಎಂದೂ ವಾದಿಸಿದರು.
ಇದನ್ನೂ ಓದಿ: ʼಗೂಂಡಾ ಕಾಯ್ದೆಯ ದುರ್ಬಳಕೆ ಸಲ್ಲದುʼ; ಯುಪಿ ಸರ್ಕಾರದ ವಿರುದ್ದ ಅಲಹಾಬಾದ್ ಹೈಕೋರ್ಟ್ ಅಸಮಾಧಾನ
ಈ ವಾದಗಳನ್ನು ಪರಿಗಣಿಸಿದ ಹೈಕೋರ್ಟ್ ಅಕ್ಟೋಬರ್ 5ರಂದು ರೈ ಅವರ ಅಪರಾಧ ನಿರ್ಣಯ ಮತ್ತು ಶಿಕ್ಷೆಗೆ ತಡೆ ನೀಡಿತು. ರಾಜಕಾರಣಿಯೊಬ್ಬರ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಮಹತ್ವದ್ದಾಗಿದ್ದರೂ, ಸಾಮಾನ್ಯ ವ್ಯಕ್ತಿಯ ಜೀವನೋಪಾಯದ ಹಕ್ಕು ಕೂಡ ಅಷ್ಟೇ ಮುಖ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಮೇಲ್ಮನವಿಯ ಅಂತಿಮ ತೀರ್ಪು ಬರುವವರೆಗೆ ರೈ ಜೀವನ ಸಾಗಿಸಲು ಸಾಧ್ಯವಾಗುವ ದೃಷ್ಟಿಯಿಂದ ಶಿಕ್ಷೆ ಮತ್ತು ಅಪರಾಧ ನಿರ್ಣಯಕ್ಕೆ ತಡೆ ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿತು.





