ಹಮಾಲಿ ಕಾರ್ಮಿಕರಿಗೆ ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ಕೂಲಿ ದರ ಹೆಚ್ಚಳ ಮಾಡಲು ರಾಯಚೂರು ಜಿಲ್ಲೆಯ ಮುದಗಲ್‌ನ ಮದೀನಾ ಟ್ರೇಡರ್ಸ್ ಸೇರಿದಂತೆ ಹಲವು ಅಂಗಡಿಗಳು ನಿರಾಕರಿಸಿವೆ. ಆ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಬೇಕು. ಅಂಗಡಿ ಮಾಲೀಕರೊಂದಿಗೆ ಶಾಮೀಲಾಗಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಒತ್ತಾಯಿಸಿ ಸಿಐಟಿಯು – ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಲಿಂಗಸಗೂರಿನಲ್ಲಿರುವ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಮಿಕರು, “ಮುದಗಲ್‌ನ 7 ಅಂಗಡಿಗಳಲ್ಲಿ ಕಳೆದ 25-30 ವರ್ಷಗಳಿಂದ ಹಮಾಲಿ ಕಾರ್ಮಿಕರು ಕನಿಷ್ಠ ಕೂಲಿಯನ್ನು ಪಡೆದು ದುಡಿದಿದ್ದಾರೆ. ಬೆಲೆ ಹೆಚ್ಚಳದ ಈ ಕಾಲದಲ್ಲಿ ಕೂಲಿದರ ಹೆಚ್ಚಳಕ್ಕೆ ಒತ್ತಾಯಿಸಿದ್ದ ಹಮಾಲಿ ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ,.
“ಏಳು ಅಂಗಡಿಗಳ ಪೈಕಿ ಒಬ್ಬ ಅಂಗಡಿ ಮಾಲೀಕ ಬದರಿನಾಥ ಟ್ರೇಡರ್ ಮುದಗಲ್ ಅವರು ಮಾತ್ರ ಈಗಿನ ಕೂಲಿ ದರಕ್ಕಿಂತ ಒಂದು ರೂಪಾಯಿ ಹೆಚ್ಚಳ ಮಾಡಿದ್ದಾರೆ. ಉಳಿದಂತೆ 6 ಅಂಗಡಿಗಳಾದ ಮದಿನಾ ಟ್ರೇಡರ್, ಮೊಹಮ್ಮದಿಯ ಟ್ರೇಡರ್, ಮಲಿಯಮ್ಮ ಟ್ರೇಡರ್, ಮಂಜುನಾಥ ಟ್ರೇಡರ್, ಭಾರತ ಟ್ರೇಡರ್ ಮತ್ತು ಸೂಗೂರೇಶ್ವರ ಟ್ರೇಡರ್ಸ್‌ನ ಮಾಲೀಕರು ಕೂಲಿ ದರವನ್ನು ಹೆಚ್ಳ ಮಾಡಿಲ್ಲ. ಅವರೆಲ್ಲರೂ ಸರ್ಕಾರದ ನಿಯಮವನ್ನು ಕಡೆಗಣಿಸುತ್ತಿದ್ದಾರೆ. ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
“ಕೂಲಿ ಹೆಚ್ಚಳಕ್ಕಾಗಿ ಮುದಗಲ್ ಹಮಾಲಿ ಕಾರ್ಮಿಕರು ಕಳೆದ ಆರು ತಿಂಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. ಆದರೂ, ಕೂಲಿ ಹೆಚ್ಚಳವಾಗಿಲ್ಲ. ಲಿಂಗಸೂಗೂರು ತಾಲೂಕಿನ ಸಹಾಯಕ ಆಯುಕ್ತರು, ಕಾರ್ಮಿಕ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು, ಮುದಗಲ್ ಪುರಸಭೆ ಅಧಿಕಾರಿಗಳು ರಾಜ್ಯ ಸರ್ಕಾರದ ಅಧಿಸೂಚನೆ ಜಾರಿ ಮಾಡಿಸುವಲ್ಲಿ ವಿಫಲವಾಗಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ಕಾನೂನುಗಳನ್ನು ಗಾಳಿಗೆ ತೂರಲಾಗಿದೆ” ಎಂದು ಆರೋಪಿಸಿದ್ದಾರೆ.
“ಕೂಲಿ ದರ ಜಾರಿಗೆ ಸಂಬಂಧಪಟ್ಟಂತೆ ಅಗತ್ಯ ಕ್ರಮ ವಹಿಸದೇ ಅಂಗಡಿ ಮಾಲೀಕರೊಂದಿಗೆ ಶಾಮೀಲಾದ ಲಿಂಗಸೂಗೂರು ಕಾರ್ಮಿಕ ನಿರೀಕ್ಷಕ ಶಾಂತಕುಮಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಸಹಾಯಕ ಆಯುಕ್ತರು ಅವಿನಾಶ್ ಶಿಂಧೆ, “ಒಂದು ವಾರದೊಳಗೆ ಅಂಗಡಿ ಮಾಲೀಕರು, ಅಧಿಕಾರಿ ಮತ್ತು ಸಿಐಟಿಯು ಮುಖಂಡರು ಹಾಗೂ ಹಮಾಲಿ ಕಾರ್ಮಿಕರನ್ನೊಳಗೊಂಡ ಸಭೆ ಕರೆಯುತ್ತೇವೆ. ಸಮಸ್ಯೆಯನ್ನು ಪರಿಹರಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಹಮಾಲಿ ಫೆಡರೇಶನ್ ನ ರಾಜ್ಯ ಉಪಾಧ್ಯಕ್ಷ ತಿಪ್ಪಯ್ಯ ನಾಯಕ್, ಯಂಕಪ್ಪ ಕೆಂಗಲ್ ಕೆಪಿಆರ್ ಎಸ್ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಡಿ.ಎಸ್ ಶರಣಬಸವ, ಮಹಮದ್ ಹನೀಫ್, ನಿರುಪಾದಿ ತುರ್ವಿಹಾಳ, ಮರಿಸ್ವಾಮಿ, ನಿಂಗಪ್ಪ, ವಿಶ್ವ ಅಂಗಡಿ, ಸೇರಿದಂತೆ ಅನೇಕರು ಇದ್ದರು.