ದಲಿತ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ ಯೋಜನಾ ಸಚಿವ ಡಿ ಸುಧಾಕರ ವಿರುದ್ದ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ʼಸರ್ಕಾರ ಯಾರ ರಕ್ಷಣೆಯನ್ನೂ ಮಾಡುತ್ತಿಲ್ಲ. ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಕಾನೂನಾತ್ಮಕ ಕ್ರಮವಾಗಲಿದೆʼ ಎಂದು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರಕರಣವನ್ನು ರಾಜಕೀಯಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ಕೇಂದ್ರ ಸಚಿವರ ಪುತ್ರ ರೈತರ ಮೇಲೆ ವಾಹನ ಚಲಾಯಿಸಿ ರೈತರ ಸಾವಿಗೆ ಕಾರಣವಾಗಿದ್ದಾಗ ಬಿಜೆಪಿ ನಾಯಕರು ಎಲ್ಲಿ ಹೋಗಿದ್ದರು. ದೇಶಾದ್ಯಂತ ಪ್ರತಿಭಟನೆ ನಡೆದರೂ ಆರೋಪಿಯನ್ನು ಬಂಧಿಸಿಲ್ಲ. ಕಾಂಗ್ರೆಸ್ ಸರ್ಕಾರ ಯಾರನ್ನೂ ರಕ್ಷಣೆ ಮಾಡುವದಿಲ್ಲ. ಜಾತಿ ನಿಂದನೆ ಸೇರಿದಂತೆ ಯಾವುದೇ ಪ್ರಕರಣ ದಾಖಲಾಗಿದ್ದರೂ ಸೂಕ್ತ ಕ್ರಮವಾಗುತ್ತದೆ” ಎಂದರು.
“ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಬಿಜೆಪಿಯವರೆಂದು ಬಂಧಿಸಿಲ್ಲ. ದೂರುದಾರರಿಗೆ ಆಗಿರುವ ಅನ್ಯಾಯದ ಮೇಲೆ ದಾಖಲಾದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸ್ವಾಮೀಜಿ ಸೇರಿದಂತೆ ಬಿಜೆಪಿ ನಾಯಕರು ಇರುವುದನ್ನೂ ಹೇಳಿದ್ದಾರೆ. ತನಿಖೆಯಿಂದ ಎಲ್ಲ ಬಯಲಾಗಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
“ಲೋಕಸಭಾ ಚುನಾವಣೆ ಸಿದ್ದತೆಗಳು ನಡೆಯುತ್ತಿದ್ದು, ಪಕ್ಷದ ಅಭ್ಯರ್ಥಿ ಯಾರಾಗುತ್ತಾರೆಂದು ಈಗಲೇ ನಿರ್ಧರಿಸಲು ಆಗುವದಿಲ್ಲ. ಪಕ್ಷದ ನಾಯಕರು ನಿರ್ಧರಿಸುತ್ತಾರೆ” ಎಂದರು.
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಸದಸ್ಯ ಜಯಣ್ಣ, ಜಿಂದಪ್ಪ, ದರೂರು ಬಸವರಾಜ, ತಿಮ್ಮಾರೆಡ್ಡಿ ಗುಡ್ಸಿ, ಅಮರೇಗೌಡ ಹಂಚಿನಾಳ, ನರಸಿಂಹಲು ಮಾಡಗಿರಿ ಸೇರಿದಂತೆ ಇತರರು ಇದ್ದರು.
ಸಿಟಿಜನ್ ಜರ್ನಲಿಸ್ಟ್ ಹಫೀಜುಲ್ಲ