ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಗುರ್ಲಾಪುರ ಕ್ರಾಸ್ನಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಅ.17ರಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ ಬಂದ್ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಎಚ್ಚರಿಕೆ ನೀಡಿದರು.
ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ನಲ್ಲಿ ಗುರುವಾರ ರೈತರ ಮುಷ್ಕರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇನ್ನೂ ಎರಡು ದಿನ ಶಾಂತಿಯುತವಾಗಿ ಹೋರಾಟ ಮುಂದುವರಿಸುತ್ತೇವೆ. ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ. ಕಳೆದ ಬಾರಿಯಂತೆ ಈ ಬಾರಿಯೂ ಹೋರಾಟದಲ್ಲಿ ವಿಜಯ ಸಾಧಿಸಿ, ಗುಲಾಲು ಹಾರಿಸಿ ಇಲ್ಲಿಂದ ತೆರಳುತ್ತೇವೆ ಎಂದರು.
ಕಬ್ಬಿಗೆ ರೈತರು ಕೇಳುತ್ತಿರುವ ನ್ಯಾಯಯುತ ದರ ಘೋಷಿಸುವವರೆಗೆ ಯಾವುದೇ ಸಕ್ಕರೆ ಕಾರ್ಖಾನೆ ಮಾಲೀಕರು ಕಾರ್ಖಾನೆಗಳನ್ನು ಪ್ರಾರಂಭಿಸಬಾರದು. ರೈತರು ಕೇಂದ್ರ ಸರ್ಕಾರಕ್ಕೆ ಎಂಎಸ್ಪಿ ದರವನ್ನು ₹60ಕ್ಕೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಎಂಎಸ್ಪಿ ಜಾರಿಯಾದರೆ ಸಕ್ಕರೆ ಕಾರ್ಖಾನೆಗಳಿಗೂ ಲಾಭವಾಗಲಿದ್ದು, ರೈತರಿಗೆ ಸೂಕ್ತ ದರ ನೀಡಲು ಮಾಲೀಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಾವಿರಾರು ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಸಿಲನ್ನು ಲೆಕ್ಕಿಸದೆ ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟದ ಸಂದೇಶ ಕೇಂದ್ರ ಸರ್ಕಾರಕ್ಕೆ ತಲುಪಿದ್ದರೂ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರು ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ. ಕಳೆದ ಒಂಬತ್ತು ವರ್ಷಗಳಿಂದ ಸಕ್ಕರೆ ಬೆಲೆ ಪರಿಷ್ಕರಣೆಯಾಗಿಲ್ಲ. ಈ ಅವಧಿಯಲ್ಲಿ ಪರಿಷ್ಕರಣೆ ಮಾಡಿದ್ದರೆ ಇಂದು ಪ್ರತಿ ಟನ್ ಕಬ್ಬಿಗೆ ₹4,700 ದರ ಪಡೆಯಬಹುದಿತ್ತು ಎಂದು ತಿಳಿಸಿದರು.
ಕೇಂದ್ರ ಸರ್ಕಾರಕ್ಕಾಗಲಿ, ಸಚಿವ ಪ್ರಲ್ಲಾದ ಜೋಶಿ ಅವರ ಮೇಲಾಗಲಿ ರೈತರಿಗೆ ಯಾವುದೇ ಮನಸ್ತಾಪವಿಲ್ಲ. ಜೋಶಿ ಅವರು ಸಕ್ಕರೆ ಸಚಿವರಾಗಿರುವುದರಿಂದ ರೈತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುವುದು ಅನಿವಾರ್ಯವಾಗಿದೆ. ಆದರೆ, ಕೆಲವರು ಹೋರಾಟಕ್ಕೆ ರಾಜಕೀಯ ಬಣ್ಣ ಹಚ್ಚುತ್ತಿರುವುದು ವಿಷಾದನೀಯ. ನಮ್ಮ ಹೋರಾಟ ಪಕ್ಷಾತೀತ, ಜಾತ್ಯತೀತವಾಗಿದ್ದು, ಯಾವುದೇ ರಾಜಕೀಯ ಪ್ರೇರಣೆಯಿಂದ ನಡೆಯುತ್ತಿಲ್ಲ. ಇದು ರೈತ ಕುಲದ ಉಳಿವಿಗಾಗಿ ಮತ್ತು ರೈತರ ಬದುಕಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ ಎಂದು ಶಶಿಕಾಂತ ಗುರೂಜಿ ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಅಥಣಿ ತಾಲೂಕು ಘಟಕದ ಅಧ್ಯಕ್ಷ ಎಂ.ಸಿ. ತಂಬೋಳಿ, ರಾಜಕುಮಾರ ಜಂಬಗಿ, ಚನ್ನಪ್ಪ ಮುಗಳಖೋಡ, ಸದಾಶಿವ ಮನೇಮಗೌಡರ, ದಶರಥ ನಾಯ, ಬಾಬು ಜತ್ತಿ, ಪ್ರಕಾಶ ಪೂಜಾರಿ, ಸೋಮಯ್ಯ ಮಠಪತಿ, ಮಹಾಂತೇಶ ಜಿವೋಜಿ, ವಿನೋದ ಮುಕುಂದ, ಸುರೇಶ ನಾಯಕ, ದುಂಡೇಶ ನೇರ್ಲಿ ಹಾಗೂ ಶಿವಬಸು ನೇಮಗೌಡರು ಉಪಸ್ಥಿತರಿದ್ದರು.




