ಧಾರವಾಡದಲ್ಲಿ ಸಮುದಾಯ ಸಾಂಸ್ಕೃತಿಕ ಸಂಘಟನೆಯ ‘ಸಮುದಾಯ–50’ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಬಲಪಂಥೀಯರ ಕೃತ್ಯವನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಸಿಂಧನೂರು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ದಾಂಧಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಕುರಿತು ಘೋಷಣೆಗಳನ್ನು ಕೂಗಿ, ತಹಶೀಲ್ದಾರ್ ಮೂಲಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿ, ಘಟನೆಗೆ ಸಂಬಂಧಿಸಿದಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವರ್ಷವಿಡೀ ರಾಜ್ಯದ ಹಲವೆಡೆ ಕಾರ್ಯಕ್ರಮಗಳನ್ನು ಆಯೋಜಿಸಿದ ಸಂಘಟನೆಯು ಏರ್ಪಡಿಸಿದ್ದ ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿ ಪ್ರಕಾಶ್ ರಾಜ್ ಅವರ ವಿರುದ್ಧ ಘೋಷಣೆ ಕೂಗಿ, ಸಭಾಂಗಣದತ್ತ ಕಲ್ಲು ತೂರಿ, ಬ್ಯಾನರ್ಗಳನ್ನು ಹರಿದು ಹಾಕಲಾಗಿದೆ. ಇಂಥ ದುರ್ವತ್ರನೆಗೆ ಸರ್ಕಾರ ಕಡಿವಾಣ ಹಾಕಬೇಕು. ಸಮಾರೋಪ ಸಮಾರಂಭದಲ್ಲಿ ಪ್ರಕಾಶ್ರಾಜ್ ಭಾಗವಹಿಸಬಾರದು ಎಂದು ಅಭಿವ್ಯಕ್ತಿ ಸ್ವಾತಂತ್ರ್ಯ ವಿರೋಧಿ ಗುಂಪು ಪ್ರತಿಭಟನೆ ಮಾಡಿರುವುದು ಖಂಡನೀಯ ಎಂದರು.
ಕಳೆದ 50 ವರ್ಷಗಳಿಂದ ರಂಗಭೂಮಿ ಹಾಗೂ ಜನಪರ ಚಳುವಳಿಗಳ ಮೂಲಕ ಅಸ್ಪೃಶ್ಯತೆ, ಕೋಮುವಾದ ಮತ್ತು ಅಸಮಾನತೆಯ ವಿರುದ್ಧ ನಿರಂತರವಾಗಿ ದನಿ ಎತ್ತುತ್ತಿರುವ ಸಮುದಾಯ ಸಂಘಟನೆಯ ಕಾರ್ಯಕ್ರಮದ ಮೇಲಿನ ಈ ಪ್ರಜಾಪ್ರಭುತ್ವ ವಿರೋಧಿ ದಾಳಿಯನ್ನು ಖಂಡಿಸಿರುವ ಸಾಹಿತಿಗಳು, ತಕ್ಷಣವೇ ದಾಳಿಕೋರರನ್ನು ಹಾಗೂ ಪ್ರಚೋದನೆ ನೀಡಿದವರನ್ನು ಗುರುತಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಭೂಮಾನಂದ ಕುಟುಂಬಕ್ಕೆ ₹8.25 ಲಕ್ಷ ಪರಿಹಾರ: ಮೊದಲ ಕಂತಿನ ₹4.12 ಲಕ್ಷ ಖಾತೆಗೆ ಜಮೆ
ಪ್ರತಿಭಟನೆಯಲ್ಲಿ ಡಿಎಚ್. ಕಂಬಳಿ, ಚಂದ್ರಶೇಖರ್ ಗೋರೆಬಾಳ, ಹುಸೇನ್ ಸಾಬ್, ಶಂಕರ ಗುರಿಕಾರ, ಮಂಜುನಾಥ್ ಗಾಂಧಿನಗರ, ಅಮೀನ್ ದಿದ್ದಿಗಿ, ಅಬ್ದುಲ್ ಸಮದ್ ಚೌದ್ರಿ, ಜಗದೀಶ್, ಇನ್ನಿತರರು ಹಾಜರಿದ್ದರು.




