ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನವಾದ ಇಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಇವರ ಅಧೀನದಲ್ಲಿ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಪ್ರಾರಂಭಿಸಲಾದ ರೈಲ್ವೇ ಚೈಲ್ಡ್ ಹೆಲ್ಸ್ ಡೆಸ್ಕನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಕೆಲವು ನಿರಾಶ್ರಿತ ಮಕ್ಕಳು ಆಶ್ರಯ ಹಾಗೂ ಜೀವನೋಪಾಯಕ್ಕಾಗಿ ವಿವಿಧ ಭಾಗಗಳಿಗೆ ಪ್ರಯಾಣಿಸಲು ರೈಲ್ವೆ ನಿಲ್ದಾಣವನ್ನು ಹಾಗೂ ರೈಲುಗಳನ್ನು ಬಳಸುತ್ತಾರೆ. ಪ್ಲಾಟ್‌ಫಾರ್ಮ್ಗೆ ಬಂದ ಅವರು ನಿಂದನೆ, ಹಿಂಸೆ, ನಿರ್ಲಕ್ಷ್ಯ ಹಾಗೂ ಶೋಷಣೆಗೆ ಒಳಗಾಗುತ್ತಾರೆ. ಹೆಚ್ಚಿನ ಬೆಂಬಲವಿಲ್ಲದ ಅವರು, ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ ಹಾಗೂ ತಮ್ಮ ಬಾಲ್ಯದಿಂದ ವಂಚಿತರಾಗುತ್ತಾರೆ. ಇಂತಹ ಮಕ್ಕಳನ್ನು ರಕ್ಷಿಸಿ, ಅವರುಗಳಿಗೆ ಪುನರ್ವಸತಿ ಕಲ್ಪಿಸಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲ ಮಾಡಿಕೊಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಕುಟುಂಬದಿಂದ ಬೇರ್ಪಟ್ಟು ಅಥವಾ ಮನೆಗಳಿಂದ ಓಡಿ ಹೋದ ಮಕ್ಕಳನ್ನು ರಕ್ಷಿಸಲು ಹಾಗೂ ಸಹಾಯಮಾಡಲು ಮಕ್ಕಳ ಸಹಾಯಕ್ಕಾಗಿ ದಿನದ 24 ಗಂಟೆಗಳ ಕಾಲವೂ ಮಕ್ಕಳ ಸಹಾಯವಾಣಿ 1098 / 112 ಕಾರ್ಯನಿರ್ವಹಿಸಲಿದ್ದು, ಭಿಕ್ಷಾಟನೆ ಮಾಡುತ್ತಿರುವ, ಮಾದಕವ್ಯಸನಿ, ಹಿಂಸೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ, ಶಿಕ್ಷಣ ವಂಚಿತ ಸೇರಿದಂತೆ ಮತ್ತಿತರ ಸಂಕಷ್ಟದಲ್ಲಿರುವ ಯಾವುದೇ ಮಗುವನ್ನು ತುರ್ತು ಪರಿಸ್ಥಿತಿಗಳಲ್ಲಿ ಕಂಡಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಗೆ ಉಚಿತ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜೂಹಿ ದಾಮೋದರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ ಸಿ.ಕೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ, ಹಿರಿಯ ಮಕ್ಕಳ ಪೊಲೀಸ್ ಕಲ್ಯಾಣಾಧಿಕಾರಿ ಪ್ರಭು ಡಿ.ಟಿ, ರೈಲ್ವೆ ಇಲಾಖೆಯ ಅಸಿಸ್ಟೆಂಟ್ ಟ್ರಾಫಿಕ್ ಮ್ಯಾನೇಜರ್ ಗೋವರ್ಧನ್ ಮೀನಾ, ಆರ್.ಪಿ.ಎಫ್‌ನ ಇನ್ಸ್ಪೆಕ್ಟರ್ ಮಧುಸೂಧನ್, ಆರ್.ಪಿ.ಎಫ್ ನ ಸಿಬ್ಬಂದಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.