ಹಾಸನದಲ್ಲಿ ಮಂಗಳವಾರದಂದು ಸುರಿದ ಭಾರೀ ಮಳೆಗೆ ನಗರದ ಹಲವೆಡೆ ಹಾನಿಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಜೂನ್ 21ರಂದು ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಾರೀ ಮಳೆ ಸುರಿದ ಪರಿಣಾಮ ನಗರದ ಉದಯಗಿರಿ, ಕುವೆಂಪುನಗರ, ಹೊಯ್ಸಳ ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಲೆಬಾಳುವ ವಸ್ತುಗಳು ಹಾನಿಯಾಗಿವೆ. ಇವುಗಳನ್ನು ಪರಿಶೀಲಿಸುವ ವೇಳೆ ಸ್ಥಳೀಯರು ಶಾಸಕರ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೆಲವೆಡೆ ರಾಜ ಕಾಲುವೆಗಳು ತುಂಬಿ ಉಕ್ಕಿ ಹರಿದ ಪರಿಣಾಮ ಮನೆಗಳ ಒಲೆಗೆ ನೀರು ನುಗ್ಗಿದೆ, ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳೂ ಕೂಡ ನೀರಿನಿಂದ ಮಿಂದೆದ್ದಿವೆ. ಇದರಿಂದ ಸ್ಥಳೀಯರು ಗೋಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
“ಬಡಾವಣೆಯಲ್ಲಿ ಮಂಗಳವಾರ ಸುರಿದ ಮಳೆಯಿಂದ ಮನೆಯ ತುಂಬೆಲ್ಲಾ ನೀರು ತುಂಬಿಕೊಂಡು, ರಾತ್ರಿಯಿಡೀ ನೀರು ಹೊರ ಹಾಕುವ ಕೆಲಸ ಮಾಡಿದ್ದೇವೆ” ಎಂದು ಸ್ಥಳೀಯ ನಿವಾಸಿಯೊಬ್ಬರು ಅವಲತ್ತುಕೊಂಡಿದ್ದಾರೆ.
“ಈ ಹಿಂದೆಯೇ ಇಲ್ಲಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಮನವಿ ಮಾಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ ಕಾಲುವೆಗಳ ತುಂಬೆಲ್ಲಾ ಮಣ್ಣು ತುಂಬಿಕೊಂಡಿರುವ ಪರಿಣಾಮ ಈ ಸಮಸ್ಯೆ ಉಲ್ಭಣಗೊಂಡಿದೆ” ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.
“ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಒಗ್ಗೂಡಿ ಇಲ್ಲಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಕೆಲವೆಡೆ ಮ್ಯಾನ್ ಹೋಲ್‌ಗಳೂ ತುಂಬಿ ಹರಿಯುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಮುಂದಿನ ಐದು ದಿನ ಭಾರಿ ಮಳೆ ಸಾಧ್ಯತೆ : ಹವಾಮಾನ ಇಲಾಖೆ
ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, “ನಗರದ ಹಲವೆಡೆ ನಿನ್ನೆ ಸುರಿದ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಹಾಗಾಗಿ ಸ್ಥಳಕ್ಕೆ ಭೇಟಿ ನೀಡಿ ಜನರ ಆಹವಾಲುಗಳನ್ನು ಸ್ವೀಕರಿಸಿದ್ದೇನೆ. ಹೂಳು ತುಂಬಿರುವ ರಾಜಕಾಲುವೆ ಮಣ್ಣನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜಕಾಲುವೆ ಹಾಗೂ ಕಾಲುವೆಗಳ ಅಂತರ ಕಡಿಮೆ ಮಾಡುವುದೇ ಇದಕ್ಕೆಲ್ಲ ಕಾರಣ ಎಂಬುದು ತಿಳಿದುಬಂದಿದ್ದು, ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.