ಕರಾವಳಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ತಾಪಮಾನ ಏರಿಕೆಯಾಗಿದೆ. ರಾಜ್ಯದಲ್ಲಿ ರಾಯಚೂರಿನಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗಿದ್ದರೆ, ನಂತರದ ಸ್ಥಾನದಲ್ಲಿ ಉಡುಪಿ ಜಿಲ್ಲೆ ಇದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಸೇರಿದಂತೆ ಕರ್ನಾಟಕ ಕರಾವಳಿ ಹಾಗೆಯೇ ಕೇರಳದ ಕನ್ನಡ ಕರಾವಳಿಯಾದ ಕಾಸರಗೋಡು ಜಿಲ್ಲೆ ಸೇರಿದಂತೆ ಕಡಲತೀರದಲ್ಲಿ ಗುರುವಾರವೂ ಬಿಸಿಲ ಝಳ ಹೆಚ್ಚಾಗಿರುವುದು ಕಂಡುಬಂದಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ.
ದಕ್ಷಿಣೋತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುರುವಾರದಂದು ಬಹುತೇಕ ಮೋಡ ಕವಿದ ವಾತಾವರಣ ಇತ್ತು. ಆದರೂ ಇಡೀ ದಿನ ಮಳೆ ಸುರಿಯಲಿಲ್ಲ. ಆಷಾಢ ಮಾಸದ ಬಿಸಿಲಿಗೆ ರೋಗರುಜಿನಗಳು ಜಾಸ್ತಿಯಾಗುತ್ತವೆ ಎಂಬ ಹೇಳಿಕೆಗೆ ಇಂಬು ನೀಡುವಂತೆ ವೈದ್ಯರ ಬಳಿ ಜನರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂದಿದೆ.
ಕರಾವಳಿಯಲ್ಲಿ ಮಳೆ ಕಣ್ಣಾಮುಚ್ಚಾಲೆಯಾಡುತ್ತಿರುವ ಕಾರಣ, ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆ ರೋಗವಾಹಕಗಳಾಗಿ ಪರಿವರ್ತನೆ ಹೊಂದುತ್ತಿದ್ದು, ಸಾಂಕ್ರಾಮಿಕ ರೋಗಗಳಲ್ಲೂ ಹೆಚ್ಚಳ ಕಂಡುಬಂದಿದೆ. ಕರಾವಳಿಯಲ್ಲಿ ಬಿಸಿಲಿನ ತಾಪಕ್ಕೆ ವೈರಲ್ ಜ್ವರ ಜಾಸ್ತಿಯಾಗತೊಡಗಿದೆ. ಉಡುಪಿ ಜಿಲ್ಲೆಯಲ್ಲಿ ಶುಕ್ರವಾರವೂ ಗರಿಷ್ಠ ತಾಪಮಾನ ಕಂಡುಬಂದಿದೆ.
ಮಳೆ ವಿವರ : ದಕ್ಷಿಣೋತ್ತರ ಕನ್ನಡ ಜಿಲ್ಲೆಯ ನೆರಿಯದಲ್ಲಿ 34 ಮಿಮೀ, ಚೆನ್ನೈತೋಡಿಯಲ್ಲಿ 23.5, ಸೋಮೇಶ್ವರದಲ್ಲಿ 23, ಬಂಟ್ವಾಳದಲ್ಲಿ 23.5, ಐವರ್ನಾಡಿನಲ್ಲಿ 21.5, ಉಬರಡ್ಕ ಮಿತ್ತೂರಿನಲ್ಲಿ 20, ರಾಯಿಯಲ್ಲಿ 18.5, ಮಂಚಿಯಲ್ಲಿ 17, ಸರಪಾಡಿಯಲ್ಲಿ 17 ಮಿಮೀ ಮಳೆಯಾಗಿದ್ದರೆ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಳೆಯೇ ಕಾಣಿಸಲಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 31.1 ಡಿ.ಸೆ, ಉಡುಪಿಯಲ್ಲಿ 34.4 ಡಿ.ಸೆ, ಉತ್ತರ ಕನ್ನಡದಲ್ಲಿ 30.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ರಾಯಚೂರಿನ ಬಳಿಕ ಉಡುಪಿಯಲ್ಲೇ ರಾಜ್ಯದಲ್ಲಿ ಅತಿ ಹೆಚ್ಚಿನ ತಾಪಮಾನ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಸಲು ಅಡೆತಡೆಗಳಿಲ್ಲ: ಸಚಿವ ಶಿವರಾಜ್ ತಂಗಡಗಿ
ರಾಜ್ಯದಲ್ಲಿ ಮಳೆಗಾಲದಲ್ಲೂ ಬಿಸಿಲಿನ ತಾಪ ಜೋರಾಗಿಯೇ ಇದೆ. ಮಳೆಯ ಅಬ್ಬರ, ಮೋಡ ಕವಿದ ವಾತಾವರಣ, ಗುಡುಗು ಮಿಂಚು ಇಲ್ಲದೇ ಮಳೆಗಾಲದ ಅನುಭವವೇ ಇಲ್ಲದಂತಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗಿನ ಜಾವ ಕೆಲ ಹೊತ್ತು ಮಳೆಯಾಗಿತ್ತು.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಸಂಜೆ ಮೋಡ ಕವಿದ ವಾತಾವರಣವಿದ್ದು, ಮಿಂಚು ಕಾಣಿಸಿತ್ತು. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದೆ. ಶುಕ್ರವಾರ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಕರ್ನಾಟಕ ವಿಭಾಗ ಐಎಂಡಿ ವರದಿ ಪ್ರಕಟವಾಗಿದೆ.