ನಿಮಗೆ ರೈತರ ಭೂಮಿಯಲ್ಲಿ ಕೈಗಾರಿಕೆ ಮಾಡಲು ಅನುಮತಿ ಕೊಟ್ಟವರು ಯಾರು. ಭೂಮಿಯೇ ಇಲ್ಲ, ರೇಷ್ಮೆ ಮಾರುಕಟ್ಟೆ ಯಾರ ಉದ್ದಾರಕ್ಕೆ. ನಿಮ್ಮ ಕಮಿಷನ್ ಗಾಗಿ ಕೈಗಾರೀಕರಣ ಮಾಡುತ್ತಿದ್ದೀರಾ ಸಚಿವರೇ ಎಂದು ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಗೋಪಾಲ ಗೌಡ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ಭೂಮಿ ಸ್ವಾಧೀನ ಕುರಿತು ಮಾತನಾಡಿದ ಅವರು, ಭೂಮಿ ಕೊಟ್ಟರೆ ಪ್ರತಿ ಕುಟುಂಬಕ್ಕೆ ಉದ್ಯೋಗ, ಭೂಮಿ ಖರೀದಿಯಲ್ಲಿ ಶೇ.6ರಷ್ಟು ತೆರಿಗೆ ಕಡಿಮೆ ಮಾಡಲಾಗುವುದು ಎಂದು ಹೇಳುತ್ತಿದ್ದಾರೆ. ಇದುವರೆಗೆ ಮಸ್ತೇನಹಳ್ಳಿ ವ್ಯಾಪ್ತಿಯಲ್ಲಿ ಎಷ್ಟು ಜನರಿಗೆ ತೆರಿಗೆ ಕಡಿಮೆ ಮಾಡಿದ್ದೀರಿ. ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದೀರಾ. ನೀವು ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲೆಸೆದರು.
ಸಿ.ಎನ್.ಡಿ ಭೂಮಿಯಲ್ಲಿ ಕೈಗಾರಿಕೆ ಮಾಡಿದರೆ ಅಡ್ಡಿಯಿಲ್ಲ. ಆದರೆ, ಕೃಷಿ ಭೂಮಿಯಲ್ಲಿ ಹೇಗೆ ಕೈಗಾರಿಕೆ ಮಾಡುತ್ತೀರಿ. ರೈತರು ಎಲ್ಲೋಗಬೇಕು. ಸಾವಿರಾರು ಕುಟುಂಬಗಳನ್ನು ಬೀದಿಗೆ ತಳ್ಳುತ್ತಿದ್ದೀರಿ. ಹೀಗಿರುವಾಗ ರೈತರನ್ನು ಟೀಕೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರೈತರನ್ನು ಉಳಿಸಲು ಯೋಚಿಸಿ. ರೈತರ ವಿರುದ್ಧ ಹೋದರೆ ಇದುವರೆಗೆ ಯಾವುದೇ ಸರಕಾರ ಉಳಿದಿಲ್ಲ. ರೈತರನ್ನು ಕಡೆಗಣನೆ ಮಾಡಿದರೆ ಸೋಲು ಖಚಿತ. ಸಚಿವರು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದರು.
ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ ಮಾತನಾಡಿ, ಕೃಷಿ ಭೂಮಿಯಲ್ಲಿ ಕೈಗಾರೀಕರಣ ಮಾಡಲು ನಮ್ಮ ವಿರೋಧವಿದೆ. ಸಚಿವರು ರೈತರ ವಿರುದ್ಧ ಮಾತನಾಡಿದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ರೈತ ಸಂಘದ ಮುನಿರಾಜು ಮಾತನಾಡಿ, ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ ಎಂದು ಹೇಳಿದವರು ಇದೀಗ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಶಾಸಕರು ಕುಮ್ಮಕ್ಕು ಕೊಟ್ಟು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹಾಜರಿದ್ದರು.