ಪ್ರಾಸಿಕ್ಯೂಷನ್ ಹೆಸರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ದೇಶದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಅಶೋಕ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಅಶೋಕ ವೃತ್ತದಿಂದ ಗಂಜ್ ಸರ್ಕಲ್‌ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ʼಕೇಂದ್ರ ಸರ್ಕಾರ ರಾಜಭವನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯನವರ ಏಳಿಗೆ ಸಹಿಸದೇ ಬಿಜೆಪಿ-ಜೆಡಿಎಸ್ ಕುತಂತ್ರ ನಡೆಸುತ್ತಿದೆ, ರಾಜಕೀಯ ಭವನವಾದ ರಾಜಭವನʼ ಎಂದು ಆರೋಪಿಸಿದರು.
ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಗಣಿ ಹಗರಣದ ಪ್ರಾಸಿಕ್ಯೂಷನ್ ಯಾವಾಗ? ರಾಜಪಾಲರು ಕೇಂದ್ರ ಸರ್ಕಾರದ ಕೈಗೊಂಬೆ, ಮೊಟ್ಟೆ ಹಗರಣದ ತನಿಖೆ ಯಾವಾಗ ಎಂಬ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ಕೆ.ರಾಜಶೇಖರ್ ಹಿಟ್ನಾಳ್, ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.