ಮೈಸೂರು | ಶವಾಗಾರದಲ್ಲಿ ಕೆಲಸ ಮಾಡುವ ಏಕಮೇವ ಮಹಿಳೆ ರಾಜಮ್ಮ

Date:

Advertisements

ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲಾ ರೀತಿಯಲ್ಲಿಯೂ ತುಳಿತಕ್ಕೆ , ದೌರ್ಜನ್ಯಕ್ಕೆ ಒಳಾಗಾಗುವುದು ಮಹಿಳೆ. ಜೀವಕೆ ಜೀವ ನೀಡಬಲ್ಲ ಶಕ್ತಿಯುಳ್ಳವಳು ಮಹಿಳೆ. ಯಾರ ದಾಸ್ಯತನಕ್ಕೂ ಇಲ್ಲ. ಮಹಿಳೆಯನ್ನ ಮನೆಗೆ ಸೀಮಿತ ಮಾಡುವ ವ್ಯವಸ್ಥೆ ಅಕ್ಷಮ್ಯ. ಆಕೆ ಸರ್ವ ಸ್ವತಂತ್ರಳು. ಆಕೆಗೆ ತನ್ನದೇ ಆದ ಜವಾಬ್ದಾರಿಗಳು ಇವೇ. ಆಕೆಗೆ ಇಲ್ಲಿ ಯಾರು ಸರಿ ಸಮಾನರಲ್ಲ. ನಾಗರಿಕ ಸಮಾಜ ಮಹಿಳೆಯರನ್ನ ಗೌರವಿಸಬೇಕು. ಯಾರೇ ಆಗಲಿ ಸನ್ನಡತೆಯಿಂದ ಕಾಣಬೇಕು. ಸಮಾಜ ಬದಲಾವಣೆ ಕಾಣುವುದು ಮಹಿಳೆಯರು ನಿರ್ಭೀತಿಯಿಂದ ಇರುವಾಗ, ಇದ್ದಾಗ. ಭಯದ ವಾತಾವರಣದಲ್ಲಿ ಮಹಿಳೆಯರು ಕಾಲ ಕಳೆಯಬಾರದು. ದೌರ್ಜನ್ಯ ಮಿತಿ ಮೀರಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು.

ಮಹಿಳೆಯರು ಯಾರಿಗೂ ಕಡಿಮೆಯಲ್ಲ. ಅವರು ಸರಿ ಸಮಾನರೇ. ಇಂತಹ ಕಾಲಘಟ್ಟದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆ ತನ್ನದೇ ಆದ ಸಾಧನೆಯ ಮೂಲಕ ಛಾಪು ಮೂಡಿಸಿದ್ದಾಳೆ. ಪ್ರತಿ ಕ್ಷೇತ್ರದಲ್ಲಿಯೂ ಅವಿರತವಾಗಿ ತನ್ನನ್ನ ತಾನು ತೊಡಗಿಸಿಕೊಂಡಿದ್ದಾಳೆ. ಮನೆಯಲ್ಲಿಯೇ ಇರಬೇಕು, ಮಕ್ಕಳ ಲಾಲನೆ ಪಾಲನೆ, ಮನೆ ಗೋಕೃತಿ ಅನ್ನುವ ಕಾಲಗಳು ಬದಲಾಗಿವೆ. ಇಂತಹ ಹೊತ್ತಿನಲ್ಲಿ ಬಹಳ ಭಿನ್ನವಾಗಿ ನಮ್ಮುಂದೆ ನಿಲ್ಲುವ ವಿಶೇಷ ಮಹಿಳೆ ರಾಜಮ್ಮ.

ರಾಜ್ಯ, ದೇಶ ಅದಷ್ಟೇ ಅಲ್ಲ, ಬಲ್ಲವರ ಅಭಿಪ್ರಾಯದಂತೆ ಇಡೀ ಏಷ್ಯಾದಲ್ಲಿ ಶವಾಗಾರದಲ್ಲಿ ಶವ ಪರೀಕ್ಷೆ ಕೆಲಸ ಮಾಡುವ ಏಕಮೇವ ಮಹಿಳೆ. ಭಯ ಪಡುವವರ ನಡುವೆ ಭಯವಿಲ್ಲದೆ ತಮ್ಮ ಕೆಲಸವನ್ನು ಗೌರವಿಸಿ, ಶ್ರದ್ದೆಯಿಂದ ನಿಭಾಯಿಸುತ್ತಿರುವುದು ಹೆಮ್ಮೆಯ ಸಂಗತಿ.

Advertisements

ಮೂಲತಃ ಮೈಸೂರು ಜಿಲ್ಲೆ , ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ವ್ಯಾಪ್ತಿಯ ಚನ್ನಪಟ್ಟಣ ಗ್ರಾಮದವರಾದ ರಾಜಮ್ಮ ಚಿಕ್ಕ ವಯಸ್ಸಿನಲ್ಲಿ ಪತಿಯನ್ನ ಕಳೆದುಕೊಂಡು ಇಡೀ ಕುಟುಂಬದ ನಿರ್ವಹಣೆ ಹೊತ್ತವರು. ಯಾರು ಇಲ್ಲ, ಎಲ್ಲರೂ ಕೈಬಿಟ್ಟರು. ಯಾರು ನೆರವಿಗೆ ಬರಲಿಲ್ಲ. ಪುಟ್ಟ ಕೂಸು, ವಯಸ್ಸಾದ ಅವ್ವ, ಅತ್ತೆ ಇವರೆಲ್ಲರನ್ನೂ ತಾವೇ ದುಡಿದು ಸಾಕಬೇಕಾದ ಅನಿವಾರ್ಯ ಪರಿಸ್ಥಿತಿ.

ಜಮೀನು ಇಲ್ಲ, ಆಸ್ತಿ ಇಲ್ಲ, ಯಾರು ಸಹಾಯಕ್ಕೆ ಇರದಾಗ ಏನು ಮಾಡಬೇಕು? ಅನ್ನುವುದೇ ತೋಚದೆ ಇದ್ದ ಸಮಯ. ನಂಜನಗೂಡು ಹುಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆಲಸ ಕೇಳಿಕೊಂಡು ಹೋಗುತ್ತಾರೆ. ಆಗ ಅಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ. ಡಿ. ರವಿಕುಮಾರ್ 2004 – 05 ರ ಸಾಲಿನಲ್ಲಿ ಹೆರಿಗೆ ವಿಭಾಗದಲ್ಲಿ ಒಂದು ಸಾವಿರ ಸಂಬಳಕ್ಕೆ ಕೆಲಸಕ್ಕೆ ನೇಮಿಸಿಕೊಂಡರು.

ಆಸ್ಪತ್ರೆಗಳಲ್ಲಿ ಡಿ ಗ್ರೂಪ್ ನೌಕರರ ಕೊರತೆ ಇರುವಾಗ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ಸಹಾಯಕ್ಕೆ ಕರೆದಿದ್ದಾರೆ. ಒಂದೆರೆಡು ಬಾರಿ ಅದನ್ನೆಲ್ಲ ನೋಡಿ ಭಯಪಟ್ಟು ಮೂರ್ಛೆ ಹೋಗಿದ್ದಾರೆ. ಅಲ್ಲದೆ, ಕೆಲವೊಮ್ಮೆ ಜ್ವರದಿಂದ ಬಳಲಿದ್ದಾರೆ. ಆಗ ವೈದ್ಯರಾದ ಡಿ. ರವಿಕುಮಾರ್ ಅವರು ನಿನ್ನಿಂದ ಸಾಧ್ಯವಿಲ್ಲ ಈ ಕೆಲಸ ಬೇಡ ಈಗ ಮಾಡುತ್ತಿರುವ ಕೆಲಸದ ಕಡೆ ಗಮನ ಹರಿಸುವಂತೆ ತಿಳಿಸಿದ್ದಾರೆ.

ಇಷ್ಟೆಲ್ಲಾ ಭಯಪಡುತಿದ್ದ ರಾಜಮ್ಮ ದಿಟ್ಟವಾದ ನಿರ್ಧಾರ ಕೈಗೊಳ್ಳುತ್ತಾರೆ. ಇಲ್ಲ, ನಾನು ಇದೇ ಕೆಲಸ ಮಾಡಬೇಕು.
ಶವಾಗಾರದಲ್ಲಿ ವೈದ್ಯರು ನಡೆಸುವ ಮರಣೋತ್ತರ ಪರೀಕ್ಷೆ ಮಾದರಿಗಳನ್ನು ಕಲಿಯಬೇಕು. ಅದರಂತೆ, ನಾನು ಸ್ವತಃ ನಿರ್ವಹಣೆ ಮಾಡಬೇಕು ಅನ್ನುವ ನಿಲುವು ತಾಳುತ್ತಾರೆ. ಅದಕ್ಕೆಲ್ಲ, ಕಾರಣ ಮನೆಯ ಬಡತನ. ಮನೆ ನಿರ್ವಹಣೆಗೆ , ಮನೆಯಲ್ಲಿರುವವರ ಸಾಕುವ ಸಲುವಾಗಿ. ಈ ಸಮಾಜದ ಗೊಡವೆ ಬೇಡ ಏನಾದರೂ ಅನ್ನಲಿ, ತಿಳಿಯಲಿ ಭಯ ಬಿಟ್ಟು ವೃತ್ತಿ ಗೌರವದಿಂದ ಕೆಲಸ ಮಾಡಲು ಆರಂಭಿಸುತ್ತಾರೆ.

ವೈದ್ಯರು ದಿನಗಟ್ಟಲೆ ನಾಲ್ಕಾರು ಮರಣೋತ್ತರ ಪರೀಕ್ಷೆ ನಡೆಸುವುದನ್ನ ನೋಡಿ ನೋಡಿ ತಾವೇ ಕೈಗೆ ಗ್ಲೌಸ್ ಧರಿಸಿ ವೈದ್ಯರಿಗೂ ಮೊದಲು ಹಾಜರಿರಲು ಆರಂಭಿಸಿದರು. ಆದಾಗ್ಯೂ, ಕ್ರಮೇಣ ಕಲಿತು ದೇಹದ ಅಂಗಾಂಗ ಭಾಗಗಳ ಕತ್ತರಿಸಿ ತೆಗೆಯುವುದು, ವೈದ್ಯರು ಹೇಳಿದ ವಿಧಾನದ ಮಾದರಿ ಪರೀಕ್ಷೆಗೆ ಅಗತ್ಯ ಸಂಗ್ರಹ , ದೇಹ ರವಾನೆ ಹೀಗೆ ಎಲ್ಲಾ ಕೆಲಸಗಳನ್ನೂ ತಾವೇ ಮಾಡುವುದನ್ನು ರೂಢಿಸಿಕೊಂಡರು.

ಇದುವರೆಗೆ ಏನಿಲ್ಲ ಅಂದರೂ ಸರಿಯಾದ ಅಂಕಿ ಅಂಶ ಇಲ್ಲದೇ ಇದ್ದರು ಅಂದಾಜಿನ ಪ್ರಕಾರ 1350 ಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಒಂದೇ ದಿನದಲ್ಲಿ ನಾಲ್ಕು ಮರಣೋತ್ತರ ಪರೀಕ್ಷೆ ನಡೆಸಿರುವುದು ಇದೆ. ಕೆಲವೊಮ್ಮೆ ಪೊಲೀಸರ ನೆರವಿಗೆ ಆತ್ಮಹತ್ಯೆ, ಕೊಲೆ ಪ್ರಕರಣ ಇಂತಹದ್ದು ಕಂಡು ಬಂದಲ್ಲಿಗೆ ತೆರಳಿ ರಾತ್ರಿ ಹಗಲು ಎನ್ನದೆ ಕೆಲಸ ಮಾಡಿದ್ದಾರೆ. ಭಯ ಅನ್ನುವುದೇ ಇರದ ಗಟ್ಟಿತನ ತೋರಿದ್ದಾರೆ.

ಪುರುಷರು ಸಹ ಮಾಡಲಾರದ, ಹೆಜ್ಜೆ ಹಿಂದಿಡುವ ಕೆಲಸವನ್ನು ಮಹಿಳೆಯಾಗಿ ನಿರ್ವಹಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ, ಸಾಧನೆಯೇ ಸರಿ. ಹೆಣ್ಣು ಅಂದರೆ ಜರಿಯುವವವರ ಮುಂದೆ ತಮ್ಮ ಕೆಲಸದ ಮೂಲಕ ಉತ್ತರ ನೀಡಿದ್ದಾರೆ. ಹೆಣ್ಣು ಮನಸು ಮಾಡಿದರೆ ಅಸಾಧ್ಯ ಎನ್ನುವುದು ಯಾವುದು ಇಲ್ಲ ಅನ್ನುವುದಕ್ಕೆ ತಕ್ಕನಾದ ನಿದರ್ಶನವಾಗಿದ್ದಾರೆ.

ಸಮಾಜ ಎಂತಹ ನಿಕೃಷ್ಟ ಮನಸ್ಥಿತಿ ಹೊಂದಿದೆ ಅಂದರೆ, ಕಡು ಬಡತನದ ಒಂಟಿ ಮಹಿಳೆ ಶವಾಗಾರದಲ್ಲಿ ತಮ್ಮ ಶ್ರಮದಿಂದ ಕೆಲಸ ಮಾಡುತ್ತಿರುವಾಗಲು ಹೇಯ ಮನಸಿನಿಂದ, ಹೀನವಾಗಿ, ಅಸಭ್ಯವಾಗಿ, ಕೀಳಾಗಿ ಮಾತಾಡಿದ್ದಾರೆ. ಶವ ಪರೀಕ್ಷೆ ಮಾಡುವಾಗ ಮದ್ಯ ಸೇವನೆ ಮಾಡಿ ಮಾಡುತ್ತಾಳೆ ಎಂದು ವದಂತಿ ಹಬ್ಬಿಸಿದ್ದಾರೆ. ಹಾಗೆ, ಹೀಗೆ ಅಂತೆಲ್ಲ ಜರಿದಿದ್ದಾರೆ. ಆದರೆ , ಅದನ್ಯಾವುದನ್ನು ಮಾಡದೆ ತನ್ನ ಸಂಸಾರದ ನಿರ್ವಹಣೆ, ಕಡು ಬಡತನ ಇಂತಹ ಕಷ್ಟಕರ ಕೆಲಸವನ್ನ ಆಯ್ಕೆ ಮಾಡುವಂತೆ ಮಾಡಿದೆ. ಆದರೆ, ಇದನ್ನ ಅರಿಯದ ಮತಿಗೇಡಿಗಳು ಮಾತಿನಲ್ಲಿ ಮನಸನ್ನ ಘಾಸಿಗೊಳಿಸಿದ್ದಾರೆ.

ಸುಮಾರು 10 ವರ್ಷಗಳ ಕಾಲ ನಂಜನಗೂಡು, 8 ವರ್ಷಗಳ ಕಾಲ ಹೆಗ್ಗಡದೇವನಕೋಟೆ, ಈಗ 2 ವರ್ಷಗಳಿಂದ ಸರಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿ ದಿನ ತಮ್ಮ ಸ್ವ ಗ್ರಾಮದಿಂದ ಸರಗೂರು ಆಸ್ಪತ್ರೆಗೆ ಬರುತ್ತಾರೆ. ಇವರೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ವೈದ್ಯರಿಗಂತೂ ಆನೆ ಬಲ. ಕೆಲಸದ ಒತ್ತಡ ತಗ್ಗಿಸಿದ್ದಾರೆ. ಯಾವುದೇ ಮರಣೋತ್ತರ ಪರೀಕ್ಷೆ ಆಗಲಿ ಸ್ವತಃ ಮಾಡುವುದರಿಂದ ನೌಕರರ ಕೊರತೆ ನೀಗಿಸಿದ್ದಾರೆ.

ಯಾವ ಕೆಲಸವೇ ಆಗಲಿ ನಿಷ್ಠೆಯಿಂದ ಮಾಡುತ್ತಾರೆ. ಮರಣೋತ್ತರ ಪರೀಕ್ಷೆ ಕರಗತ ಆಗಿರುವುದರಿಂದ ನಿರ್ಭಯವಾಗಿ ತಾವೇ ನಿಭಾಯಿಸುವ ಹಂತಕ್ಕೆ ತಲುಪಿದ್ದು ವೈದ್ಯರಿಗೆ ನಿರಾಳತೆ ತರಿಸಿದೆ. ಸಿಬ್ಬಂದಿಗಳಿಗೂ ನೆರವಾಗುತ್ತಾರೆ. ಹಲವರು ಇವರನ್ನ ಗುರುತಿಸಿ ಸನ್ಮಾನಿಸಿ ಗೌರವಿಸಿದ್ದಾರೆ.

ಚಲನಚಿತ್ರ ನಟ ದುನಿಯಾ ವಿಜಯ್ ಅವರು ರಾಜಮ್ಮ ಅವರ ವಿಚಾರ ತಿಳಿದು ಭೀಮಾ ಚಿತ್ರ ಬಿಡುಗಡೆ ವೇಳೆ ಸ್ವತಃ ಬೆಂಗಳೂರಿನಿಂದ ರಾಜಮ್ಮ ಅವರನ್ನು ಭೇಟಿ ಮಾಡಲು ಬಂದಿದ್ದಾರೆ. ಆರ್ ಜೆ ಸುನಿಲ್ ಅವರ ಜೊತೆ ಮೊಟ್ಟ ಮೊದಲ ಬಾರಿಗೆ ಸಂದರ್ಶನ ಮಾಡಿ, ಸನ್ಮಾನಿಸಿ ಇಡೀ ಏಷ್ಯಾದಲ್ಲಿಯೇ ಇಂತಹ ಕೆಲಸ ಮಾಡುವ ಏಕೈಕ ಮಹಿಳೆ ಎಂದು ಬಹು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಾಜಕ್ಕೆ ಮಾದರಿಯಾಗಿ, ಮಹಿಳೆಯರಿಗೆ ಸ್ಫೂರ್ತಿಯಾಗಿದ್ದೀರಿ.ನಿಮ್ಮ ಕಾಯಕ ಮುಂದುವರಿಯಲಿ ನಿಮ್ಮ ಬಗ್ಗೆ ಗೌರವ, ಹೆಮ್ಮೆಯಿದೆ. ಬೀಮಾ ಚಿತ್ರ ಕುರಿತಾಗಿಯೂ ಮಾತನಾಡಿ ನಿಮ್ಮ ನೋಡಿ, ನಿಮ್ಮ ಜೊತೆ ಮಾತನಾಡಿ, ನಿಮ್ಮ ಸಂದರ್ಶನ ಮಾಡಲು ಬಂದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ. ರವಿಕುಮಾರ್ ಈದಿನ.ಕಾಮ್ ಜೊತೆ ಮಾತನಾಡಿ ” ಇಡೀ ರಾಜ್ಯದಲ್ಲಿ ಎಲ್ಲೂ ಕೇಳಿರಲು ಸಾಧ್ಯವಿಲ್ಲ. ಎಲ್ಲಿಯೂ ಸಹ ಮಹಿಳೆ ಶವಾಗಾರದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರುವ ಉದಾಹರಣೆ ಇಲ್ಲವೇ ಇಲ್ಲ. ರಾಜ್ಯದಲ್ಲಿ ರಾಜಮ್ಮ ಅವರೊಬ್ಬರೇ ಶವ ಪರೀಕ್ಷೆ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. “

ನಾನು ಕೆಲಸಕ್ಕೆ ನೇಮಿಸಿಕೊಂಡ ದಿನದಿಂದ ಹಿಡಿದು ಇದುವರೆಗೂ ನಾನು ಕಂಡಂತೆ ಅತಿ ಹೆಚ್ಚು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪಿಎಂ ವರದಿಯಲ್ಲಿ ಅದೆಲ್ಲ ದಾಖಲು ಆಗಿರುತ್ತದೆ. ಬಡತನ ಅವರನ್ನು ಈ ಕೆಲಸ ಮಾಡುವಂತೆ ಮಾಡಿದೆ. ಹಣದ ಅಗತ್ಯತೆ ಕೂಡ ಕಾರಣ. ಮಹಿಳೆ ಇಂತಹ ಕಷ್ಟಕರವಾದ ಕೆಲಸ ಮಾಡುವುದು ಸಾಮಾನ್ಯವಾದ ವಿಷಯವಲ್ಲ. ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಇದನ್ನೇ ಅಂತಲ್ಲ ಯಾವುದೇ ಕೆಲಸವಿದ್ದರು ಮಾಡ್ತಾರೆ ಆಸ್ಪತ್ರೆಯಲ್ಲಿ ಸುಮ್ಮನೆ ಕೂರುವುದಿಲ್ಲ.

ನನ್ನ ಆಡಳಿತಾವಧಿಯಲ್ಲಿ ಅತ್ಯಂತ ಹೆಚ್ಚು ಮರಣೋತ್ತರ ಪರೀಕ್ಷೆ ನಡೆಸಿರುವ ಖ್ಯಾತಿ ಅವರದ್ದು. ಜೊತೆಗೆ ಯಾವುದೇ ಸಮಯ ಆಗಲಿ. ಯಾವ ಹೊತ್ತೆ ಆಗಲಿ ವೈದ್ಯರನ್ನು ಕಾಯುತ್ತಾ , ಕೇಳುತ್ತಾ ಕೂರುವುದಿಲ್ಲ. ತಕ್ಷಣ ಏನೆಲ್ಲಾ ಮಾಡಬೇಕು ಅದನ್ನೆಲ್ಲ ಮಾಡಿರುತ್ತಾರೆ. ಅಷ್ಟರ ಮಟ್ಟಿಗೆ ಕೆಲಸದ ಮೇಲಿನ ಆಸಕ್ತಿ ಇದೇ. ಅಸಾಮಾನ್ಯವಾದ ಕೆಲಸವನ್ನು ರಾಜಮ್ಮ ಮಾಡುತ್ತಾ ಇದ್ದಾರೆ. ನಮಗೂ ಈ ವಿಚಾರದಲ್ಲಿ ತುಂಬಾನೇ ಹೆಮ್ಮೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರಗೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಪಾರ್ಥಸಾರಥಿ ಮಾತನಾಡಿ ” ರಾಜಮ್ಮ ಶವ ಪರೀಕ್ಷೆಯಾಗಲಿ, ಇತರೆ ಕೆಲಸವೇ ಆಗಲಿ ಸದಾ ಮುಂದು. ಸಾರ್ವಜನಿಕರಿಗೆ ಮಾಹಿತಿ ನೀಡುವುದು, ನೆರವಿನ ಕೆಲಸ ಮಾಡುತ್ತಾರೆ. ಇಂತಹ ದಿಟ್ಟ ಮಹಿಳೆ ನಮ್ಮ ಆಸ್ಪತ್ರೆಯಲ್ಲಿ ನಮ್ಮ ಜೊತೆ ಕೆಲಸ ಮಾಡುತ್ತಿರುವುದು ನಮಗೂ ಸಂತಸದ ವಿಚಾರ. ಡಾ. ಡಿ. ರವಿಕುಮಾರ್ ಅವರಿಂದ ಕೆಲಸ ಕಲಿತು ನೈಪುಣ್ಯತೆಯಿಂದ ಲೀಲಾಜಾಲವಾಗಿ ಮರಣೋತ್ತರ ಪರೀಕ್ಷೆ ನಡೆಸಿ ಅದನ್ನೆಲ್ಲ ಫರೆನ್ಸಿಕ್ ಲ್ಯಾಬ್ ಗೆ ಕಳಿಸಿ, ವಾರಸುದಾರರಿಗೆ ಒಪ್ಪಿಸುವ ತನಕ ತಮ್ಮ ಜವಾಬ್ದಾರಿಯಿಂದ ಸ್ವಲ್ಪವು ಕದಲುವುದಿಲ್ಲ.”

ರಾಜಮ್ಮ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಪುರುಷರಿಗೆ ಯಾವುದರಲ್ಲೂ ಕಡಿಮೆ ಅಲ್ಲ. ಪುರುಷರೇ ಮಾಡುವ ಕೆಲಸ. ಅದರಲ್ಲೂ, ಭಯವಿರದ ಗಟ್ಟಿತನದವರೆ ಆಗಬೇಕು ಅನ್ನುವ ನಿರ್ಧಾರಿತ ಸಂದರ್ಭದಲ್ಲಿ ಮಹಿಳೆಯಾಗಿ ಶವಾಗಾರದಲ್ಲಿ ಕೆಲಸ ಮಾಡುವುದು ಉತ್ಪ್ರೇಕ್ಷೆ ಅಲ್ಲ. ಅವರ ಕೆಲಸಕ್ಕೆ ಪ್ರಶಂಸೆ ಮಾಡಲೇಬೇಕು. ಅವರಿಗೆ ಇನ್ನೂ ಉತ್ತಮವಾದ ಸ್ಥಾನ ಲಭಿಸಲಿ ಅನ್ನುವುದು ನನ್ನ ಆಶಯ, ನಾವೆಲ್ಲಾ ಅವರೊಟ್ಟಿಗೆ ಇದ್ದೇವೆ ಎಂದರು.

ರಾಜಮ್ಮ ಮಾತನಾಡಿ ” ಕಷ್ಟದ ಜೀವನದಲ್ಲಿ ಗಟ್ಟಿ ಮನಸ್ಸು ಮಾಡಿ, ಇದೇ ಕೆಲಸ ಮಾಡಬೇಕು ಅನ್ನುವ ನಿರ್ಧಾರ ಮಾಡಿದೆ. ನನಗೆ ಭಯ ಇಲ್ಲ. ಯಾಕಂದ್ರೆ ಕಷ್ಟ ಇದೆ. ಮನೆಯಲ್ಲಿ ಮಗು, ತಾಯಿ, ಅತ್ತೆ ಇದ್ದಾರೆ. ಇವರನ್ನೆಲ್ಲ ಸಾಕಬೇಕು. ಒಂದು ತಿಂಗಳ ಪಾಪು ಇರುವಾಗಲೂ ನಾನು ಮನೆಯಲ್ಲಿ ಕುಳಿತಿಲ್ಲ ಆಗಲು ಸಹ ನನ್ನ ಕೆಲಸ ನಾನು ಮಾಡಿದ್ದೀನಿ. ಭಯ ಎಂದರೆ, ಕಷ್ಟ ಎಂದರೆ ಹೊಟ್ಟೆ ತುಂಬುವುದಿಲ್ಲ. ಯಾರು ಕೊಡುವುದಿಲ್ಲ. ನಮಗೆ ನಾವೇ ಕಷ್ಟ ಪಟ್ಟು ದುಡಿಯಬೇಕು. ಇದಕ್ಕಾಗಿಯೇ ಈ ಆಯ್ಕೆ ಮಾಡಿದೆ. “

ಇವಾಗ ಎಲ್ಲರೂ ನಮ್ಮವರು ಅನ್ನುತ್ತಾರೆ. ಅದೇ ನಾನು ಕಷ್ಟದಲ್ಲಿ ಇದ್ದಾಗ ಯಾರೊಬ್ಬರೂ ನೋಡಿಲ್ಲ. ಇಲ್ಲ ಸಲ್ಲದ ಮಾತಾಡಿ ನೋವು ಮಾಡಿದರು. ಈಗ ಮಾತ್ರ ನಮ್ಮವರು ಅನ್ನುತ್ತಾರೆ. ಮದ್ಯ ಸೇವಿಸುತ್ತಾಳೆ ಅಂದ್ರು , ಏನೆಲ್ಲಾ ಅಂದ್ರು. ಆದ್ರೆ, ನನಗೆ ನಿಜಕ್ಕೂ ಸಹಾಯ ಮಾಡಿದ್ದು ಡಿ. ರವಿಕುಮಾರ್ ಸಾರ್. ಅವರ ಜೊತೆಗೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ. ಇವರೆಲ್ಲ ಇಲ್ಲ ಅಂದಿದ್ದರೆ ನನಗೆ ಬದುಕೇ ಇಲ್ಲ. ನನ್ನ ಕುಟುಂಬ ನಿರ್ವಹಣೆ ಕಷ್ಟ ಆಗ್ತಾ ಇತ್ತು.

ನಾನು ಭಯ ಪಟ್ಟಿದ್ದರೆ ಈ ಕೆಲಸ ಯಾರು ಮಾಡ್ತಾರೆ? ನನ್ನ ಮನೆ ಯಾರು ನೋಡ್ತಾರೆ? ಭಯ ಯಾವುದು ಇಲ್ಲ ಸಾರ್. ಕಷ್ಟಪಟ್ಟು, ಇಷ್ಟಪಟ್ಟು ಮಾಡಿದರೆ ಎಲ್ಲ ಕೆಲಸವೂ ಒಂದೇ. ಇಲ್ಲಿ ಡಾ. ಪಾರ್ಥಸಾರಥಿ ಅವರು, ಆಸ್ಪತ್ರೆ ಸಿಬ್ಬಂದಿ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವರೆಲ್ಲರಿಂದ ನನಗೆ ಭಯ , ಕಷ್ಟ ಅನ್ನೋದು ಇಲ್ಲ.

ಎಷ್ಟೇ ಸರಿ ಹೊತ್ತಾಗಲಿ ನೀರಿನಲ್ಲಿ ಬಿದ್ದಿರುವ ಶವ ಮೇಲೆತ್ತಿ ಸ್ಥಳದಲ್ಲಿಯೇ ಶವ ಪರೀಕ್ಷೆ ಮಾಡಿದ್ದೀನಿ. ಪೊಲೀಸರು ಕರೆದ ತಕ್ಷಣ ಹೋಗ್ತೀನಿ. ನಮ್ಮ ಆಸ್ಪತ್ರೆ ವೈದ್ಯರು ಸಹ ಸಹಕಾರ ನೀಡುತ್ತಾರೆ. ಎಲ್ಲರೂ ಬೆಂಬಲ ಕೊಡ್ತಾರೆ. ಹಾಗಾಗಿ, ನನಗೆ ಇವತ್ತಿನವರೆಗೂ ಬೇಸರ ಅನಿಸಿಲ್ಲ. ಬೇರೆ ಜನರಿಂದ, ಸಂಭಂದಿಕರಿಂದ ನೋವಾಗಿದೆ ಹೊರತು ನಾನು ಮಾಡುವ ಕೆಲಸ ಯಾವುತ್ತು ನೋವು ತರಿಸಿಲ್ಲ.

ನಾನು ಸರಿ ಸುಮಾರು 20 ವರ್ಷಗಳಿಂದ ಕೆಲಸ ಮಾಡ್ತಾ ಇದ್ದೀನಿ. ಈಗ ಡಿ ದರ್ಜೆ ನೌಕರಳಾಗಿ ಹೊರ ಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡಿದ್ದಾರೆ. ನಾನು ಮನವಿ ಮಾಡೋದು ಖಾಯಂ ನೇಮಕ ಮಾಡಿಕೊಳ್ಳಬೇಕು. ಡಿ ಗ್ರೂಪ್ ದರ್ಜೆ ನೌಕರಳಾಗಿ. ನಾನು ಜಿಲ್ಲಾ ಆರೋಗ್ಯಾಧಿಕಾರಿ, ಆರೋಗ್ಯ ಇಲಾಖೆ ಸಚಿವರಲ್ಲಿ ಮನವಿ ಮಾಡೋದು ಇದಿಷ್ಟನ್ನೇ. ಮನೆಯಲ್ಲಿ ಬಡತನ ಇದೆ. ಇದೊಂದು ಮಾಡಿಕೊಟ್ಟರೆ ನಮ್ಮ ಬದುಕಿಗೂ ಆಧಾರ ಆಗುತ್ತದೆ ಎಂದು ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಣೆ : ಶಿಲ್ಪಾ ನಾಗ್

ರಾಜ್ಯದಲ್ಲಿ ಗಮನ ಸೆಳೆಯದೆ ಎಲೆ ಮರೆ ಕಾಯಿಯಂತೆ ರಾಜಮ್ಮ ಶವಗಾರದಲ್ಲಿ ಶವ ಪರೀಕ್ಷೆ ಕಾಯಕ ಮಾಡುತ್ತಿದ್ದಾರೆ. ಇಂತಹ ನಿಷ್ಠಾವಂತ, ದಿಟ್ಟ ಮಹಿಳೆ ಕಷ್ಟದಲ್ಲಿದ್ದು, ಕುಟುಂಬ ನೆರವನ್ನು ಬಯಸಿದೆ. ಆರೋಗ್ಯ ಮತ್ತು ಕುಟುಂಬ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಆವರು, ಮೈಸೂರು ಜಿಲ್ಲಾ ಆರೋಗ್ಯಧಿಕಾರಿಯವರು ರಾಜಮ್ಮ ಅವರ ಮನವಿಯನ್ನು ಆಲಿಸಿ ಡಿ ಗ್ರೂಪ್ ದರ್ಜೆ ನೌಕರರಾಗಿ ಖಾಯಂಗೊಳಿಸುವ ಮೂಲಕ ಕುಟುಂಬದ ನೆರವಿಗೆ ಧಾವಿಸುವುದೇ ಕಾದು ನೋಡಬೇಕಿದೆ. ಈ ವಿಚಾರವಾಗಿ
ಸಂಭಂದಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಈದಿನ. ಕಾಮ್ ಮಾತನಾಡಿ ಹೆಚ್ಚಿನ ಮಾಹಿತಿಯೊಡನೆ ವರದಿ ಮಾಡಲಿದೆ.

WhatsApp Image 2025 02 05 at 18.09.20
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X