ವಕೀಲ ಚಾನ್ ಪಾಷಾ ಅವರನ್ನು ವಕೀಲ ಸಂಘದಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿದ ಕಾರಣಕ್ಕಾಗಿ 11 ಮಂದಿ ವಕೀಲರು ದಲಿತ ಮುಖಂಡರಿಗೆ ಜಾತಿ ನಿಂದನೆ ಮಾಡಿದ್ದಾರೆ. ಆ 11 ಮಂದಿ ವಕೀಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಲಿತ ನಾಯಕರು ಒತ್ತಾಯಿಸಿದ್ದಾರೆ.
ರಾಮನಗರದಲ್ಲಿ ದಲಿತ ಮುಖಂಡರು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದು, “ಗ್ಯಾನವ್ಯಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಣಾಸಿ ಜಿಲ್ಲಾ ನ್ಯಾಯಾಲಯ ನೀಡಿದ್ದ ತೀರ್ಪು ಕುರಿತು ರಾಮನಗರದ ವಕೀಲ ಚಾನ್ ಪಾಷಾ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದು ಹಿಂದು ಧರ್ಮೀಯರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದ ಮೇಲೆ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ ಶ್ರೀವತ್ಸ ಅವರು ಚಾನ್ ಪಾಷಾ ಅವರನ್ನು ಸಂಘದಿಂದ ವಜಾಗೊಳಿಸಿದ್ದಾರೆ. ಅಲ್ಲದೆ, ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ದಲಿತ ಮುಖಂಡರನ್ನು ವಕೀಲರು ನಿಂದಿಸಿದ್ದಾರೆ” ಎಂದು ಆರೋಪಿಸಿದರು.
“ಚಾನ್ ಪಾಷಾ ಅವರನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ ದಲಿತ ಮುಖಂಡರು ವಕೀಲರ ಕಚೇರಿಗೆ ತೆರಳಿ, ಚಾನ್ ಪಾಷಾ ವಿರುದ್ಧದ ಆರೋಪ ಸುಳ್ಳಿನಿಂದ ಕೂಡಿದೆ. ಅವರನ್ನು ವಜಾಗೊಳಿಸಿರುವುದನ್ನು ಮತ್ತೊಮ್ಮೆ ಪುನರ್ ಪರಿಶೀಲಿಸಿ ಎಂದು ಕೇಳಿದ್ದಾರೆ. ಈ ವೇಳೆ, 11 ಮಂದಿ ವಕೀಲರು ದಲಿತ ಮುಖಂಡರಿಗೆ ಜಾತಿ ನಿಂದನೆ ಮಾಡಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ವಿವಾಹದ ಆನ್ಲೈನ್ ನೋಂದಣಿ ಪ್ರಕ್ರಿಯೆಗೆ ಫೆ.15 ರಿಂದ ಪ್ರಾಯೋಗಿಕ ಚಾಲನೆ
“ಜಾತಿ ನಿಂದನೆ ಕುರಿತು ದಲಿತ ಮುಖಂಡರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದಾಗ ಪೊಲೀಸರು ಕೇಸ್ ದಾಖಲಿಸಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ. ಅಲ್ಲದೇ ಯಾವುದೇ ತಪ್ಪು ಮಾಡದ ದಲಿತ ಮುಖಂಡರಿಗೆ ಪೊಲೀಸ್ ಠಾಣೆಯಿಂದ ನೋಟಿಸ್ ಬಂದಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು ಹಾಗೂ ಜಾತಿ ನಿಂದನೆ ಮಾಡಿದ 11 ಮಂದಿ ವಕೀಲರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಪ್ರಕರಣ ದಾಖಲಿಸಿ ನಮಗೆ ನ್ಯಾಯ ಕೊಡಿಸಬೇಕು” ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.