ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ರಾಜ್ಯದ 28 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.
ರಾಮನಗರದ ಸ್ಫೂರ್ತಿ ಭವನದಲ್ಲಿ ಬುಧವಾರ ಬಿಎಸ್‌ಪಿ ವತಿಯಿಂದ ಹಮ್ಮಿಕೊಂಡಿದ್ದ ಡಾ. ಬಿ ಆರ್ ಅಂಬೇಡ್ಕರ್ ಅವರ ಪರಿನಿಬ್ಬಾಣ ಕಾರ್ಯಕ್ರಮ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
“ನಮ್ಮ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಐಎನ್‍ಡಿಐಎ(ಇಂಡಿಯಾ) ಜತೆಗೂ ಹೋಗದೆ ಸ್ವತಂತ್ರವಾಗಿ ಚುನಾವಣೆ ಎದುರಿಸಲಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ 10ರಂದು ಪಕ್ಷದ ರಾಷ್ಟ್ರೀಯ ಸಭೆ ನಡೆಯಲಿದ್ದು, ರಾಜ್ಯದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ” ಎಂದು ಹೇಳಿದರು.
“ಪ್ರತಿಷ್ಠಿತ ಲೋಕಸಭಾ ಕ್ಷೇತ್ರವಾಗಿರುವ ಹಾಗೂ ಡಿ ಕೆ ಸುರೇಶ್ ಸದ್ಯ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರದಲ್ಲಿ ಪಕ್ಷದ ನಾಯಕ ಡಾ ಚಿನ್ನಪ್ಪ ವೈ. ಚಿಕ್ಕಹಾಗಡೆ ಅವರನ್ನು ಈ ಸಲವೂ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಅವರ ಗೆಲುವಿಗಾಗಿ ಕ್ಷೇತ್ರದ ವ್ಯಾಪ್ತಿಯ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕು” ಎಂದು ಹೇಳಿದರು.
“ಘೋಷಿತ ಅಭ್ಯರ್ಥಿಗಳು ಈಗಿನಿಂದಲೇ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕು. ಗ್ರಾಮ ಮಟ್ಟದಲ್ಲಿ ಮನೆ ಮನೆಗೆ ಭೇಟಿ ನೀಡಿ ಪಕ್ಷದ ಪರ ಜನಾಭಿಪ್ರಾಯ ರೂಪಿಸಬೇಕು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮಾಡಿರುವ ವಂಚನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಆ ಮೂಲಕ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಬೇಕು” ಎಂದು ಸಲಹೆ ನೀಡಿದರು.
ಅಭ್ಯರ್ಥಿ ಡಾ. ಚಿನ್ನಪ್ಪ ವೈ. ಚಿಕ್ಕಹಾಗಡೆ ಮಾತನಾಡಿ, “ಕ್ಷೇತ್ರವು ಬಿಬಿಎಂಪಿ, ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳನ್ನೂ ಒಳಗೊಂಡಿದೆ. ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿರುವ ಡಿ ಕೆ ಸುರೇಶ್ ಯಾವುದೇ ಕೊಡುಗೆ ನೀಡಿಲ್ಲ. ಚುನಾವಣೆ ಸಂದರ್ಭದಲ್ಲಷ್ಟೇ ಗಮನ ಹರಿಸುವ ಅವರಿಗೆ ಕ್ಷೇತ್ರದ ಅಭಿವೃದ್ಧಿ ಕುರಿತು ಯಾವುದೇ ಕಾಳಜಿ ಇಲ್ಲ” ಎಂದರು.
“ಕಳೆದ ಬಾರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾಗ, ಇಲ್ಲಿನ ಮತದಾರರು ನನಗೆ 20,000 ಮತಗಳನ್ನು ನೀಡಿದ್ದರು. ಈ ಬಾರಿ ಹೆಚ್ಚಿನ ತಯಾರಿ ನಡೆಸುತ್ತಿದ್ದು, ಹಿಂದಿಗಿಂತಲೂ ಹೆಚ್ಚಿನ ಮತಗಳನ್ನು ಪಡೆಯುವತ್ತ ಗಮನ ಹರಿಸಲಾಗಿದೆ. ಹಾಗಾಗಿ ಹಳ್ಳಿಗಳ ಭೇಟಿ ಸೇರಿದಂತೆ ಅಲ್ಲಲ್ಲಿ ಮುಖಂಡರೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಿ ತಯಾರಿ ನಡೆಸಲಾಗುತ್ತಿದೆ” ಎಂದು ತಿಳಿಸಿದರು.
ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿ, “ಅಂಬೇಡ್ಕರ್ ಅವರ ಋಣದಲ್ಲಿ ಅಧಿಕಾರ ಅಂತಸ್ತು ಸೇರಿದಂತೆ ಹಲವು ಸ್ಥಾನಮಾನ ಪಡೆದವರು ತಾವು ಯಾರ ಕಾರಣದಿಂದ ಅವೆಲ್ಲವನ್ನೂ ಪಡೆದಿದ್ದಾರೊ ಅವರನ್ನೇ ಮರೆಯುತ್ತಿದ್ದಾರೆ. ಈ ದೇಶದ ಬಹುಸಂಖ್ಯಾತ ಶೋಷಿತ ಹಾಗೂ ಶೂದ್ರ ಸಮುದಾಯಗಳು ಅಂಬೇಡ್ಕರ್ ಅವರು ನೀಡಿದ ಸಂದೇಶ ಹಾಗೂ ಅವರ ತತ್ವಾದರ್ಶಗಳನ್ನು ಪಾಲಿಸುವ ಬದಲು ಅವರ ಭಾವಚಿತ್ರವಿಟ್ಟು ಆರಾಧನೆ ಮಾಡುತ್ತಿವೆ” ಎಂದು ಕಳವಳ ವ್ಯಕ್ತಪಡಿಸಿದರು.
“ಈ ದೇಶದಲ್ಲಿ ಶೋಷಿತರಿಗೆ ಕಾನೂನಾತ್ಮಕ ರಕ್ಷಣೆ ಸಿಕ್ಕಿದ್ದರೆ ಅದು ಅಂಬೇಡ್ಕರ್ ರಚಿಸಿರುವ ಸಂವಿಧಾನದಿಂದಲೇ ಹೊರತು ಯಾವುದೇ ದೇವರುಗಳಿಂದಲ್ಲ. ಶ್ರೀಮಂತರು ಹಾಗೂ ಕೆಲವೇ ಸಮುದಾಯದವರಿಗೆ ಮೀಸಲಾಗಿದ್ದ ಮತದಾನದ ಹಕ್ಕನ್ನು ಎಲ್ಲರಿಗೂ ಕೊಟ್ಟಿದ್ದು ಅಂಬೇಡ್ಕರ್” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಂಬೇಡ್ಕರ್ ವಿಚಾರಗಳು ನಮಗೆ ಸ್ಪೂರ್ತಿ ನೀಡುತ್ತವೆ: ತಹಶೀಲ್ದಾರ್ ಜಮಖಂಡಿ
“ದೇಶದಲ್ಲಿ ಇಂದಿಗೂ ಪರಿಶಿಷ್ಟರ ಮೇಲೆ ದೌರ್ಜನ್ಯ, ಕೊಲೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಧರ್ಮಗಳ ನಡುಗೆ ಕೋಮು ಘರ್ಷಣೆಗಳು ನಡೆಯುತ್ತಲೇ ಇವೆ. ದೇಶವನ್ನು ಆಳಿದ ಕಾಂಗ್ರೆಸ್ ಮತ್ತು ಬಿಜೆಪಿ ಈ ದೇಶವನ್ನು ಅಧೋಗತಿಗೆ ಕೊಂಡೊಯ್ದಿದ್ದು, ಹಿಂದೂಗಳು ಒಂದು ಎನ್ನುವವರಿಗೆ ಜಾತಿ ದೌರ್ಜನ್ಯ ಕಾಣುವುದಿಲ್ಲ. ಹಾಗಾಗಿ ಬಹುಸಂಖ್ಯಾತರು ಮತ ಮಾರಿಕೊಳ್ಳದೆ ವಿವೇಚನೆಯಿಂದ ಮತ ಚಲಾಯಿಸಿದರೆ ಮಾತ್ರ ದೇಶದಲ್ಲಿ ಬದಲಾವಣೆ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಪಕ್ಷದ ರಾಮನಗರ ಜಿಲ್ಲಾ ಉಸ್ತುವಾರಿ ಎಂ. ನಾಗೇಶ್, ಅನ್ನದಾನಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಮುರುಗೇಶ್, ಮುಖಂಡರುಗಳಾದ ಗೌರಮ್ಮ, ಪಾರ್ವತಮ್ಮ, ಬಸಮ್ಮ ಸೇರಿದಂತೆ ಇತರರು ಇದ್ದರು.