ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ರಾಮನಗರ ತಾಲೂಕಿನ ಕೆರೆಗಳಿಗೆ ನೀರಿಲ್ಲದೆ ಅಭಿವೃದ್ಧಿ ಕುಂಠಿತವಾಗಿದೆ. ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸಬೇಕು. ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕಿ ಹಾಗೂ ಸತ್ತೇಗಾಲ ಯೋಜನೆಯನ್ನು ಶೀಘ್ರವಾಗಿ ಮುಕ್ತಾಯ ಮಾಡಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷರ ಯೋಗೀಶ್‌ಗೌಡ ಆಗ್ರಹಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡರ ನೇತೃತ್ವದಲ್ಲಿ ಮೆಣಸಿಗನಹಳ್ಳಿ ಹೊಸಕೆರೆಗೆ ಪೈಪ್‌ಲೈನ್ ಮಾಡಿ ನೀರನ್ನು ತುಂಬಿಸುವಂತೆ ಆಗ್ರಹಿಸಿ ಆಯೋಜಿಸಿದ್ದ 371ನೇ ದಿನದ ಹೋರಾಟದ ಪ್ರತಿಭಟನೆಯಲ್ಲಿ ಮಾತನಾಡಿದರು.
“ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಲಕ್ಷಾಂತರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸಿದ್ದು, ಜಿಲ್ಲೆಯ ಕೆರೆಗಳಿಗೆ ನೀರಿಲ್ಲವಾಗಿದೆ” ಎಂದರು.
ರೈತ ಮುಖಂಡ ಸಿ ಪುಟ್ಟಸ್ವಾಮಿ ಮಾತನಾಡಿ, “ಕೆರೆಗಳಿಗೆ ನೀರನ್ನು ತುಂಬಿಸಿದರೆ ಅಂತರ್ಜಲ ಮರುಪೂರ್ಣವಾಗಿ ರೈತರ ಹೈನುಗಾರಿಕೆಗೆ ಅನುಕೂಲವಾಗಲಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಬೇಸಾಯ ಬಿಟ್ಟು ಹೈನುಗಾರಿಕೆ ನಂಬಿದ್ದಾರೆ. ಇದೀಗ ಕೆರೆಗಳಿಗೆ ನೀರು ಇಲ್ಲದೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು, ಹೈನೋದ್ಯಮವೂ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಅಧಿಕಾರಕ್ಕೆ ಸೀಮಿತವಾಗದೆ ಅಭಿವೃದ್ಧಿ ಬಗ್ಗೆಯೂ ಕಾಳಜಿ ವಹಿಸಬೇಕು” ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೂಹಳಿ ನಿಂಗೇಗೌಡ ಮಾತನಾಡಿ, “ನಾನು ಗ್ರಾ.ಪಂ. ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಮನರೇಗಾದಿಂದ ಕೆರೆಯ ಅಭಿವೃದ್ದಿ ಮಾಡಲು ಮುಂದಾದ ವೇಳೆ ಕೆರೆ ಒಡೆತುಹೋಗಿತ್ತು. ಬಳಿಕ ಯೋಗೇಶ್ವರ್ ಈ ಕೆರೆಯನ್ನು ನಿರ್ಮಾಣ ಮಾಡುವ ಆಸಕ್ತಿ ತೋರಿದರು. ಬಳಿಕ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ₹4 ಕೋಟಿ ಅನುದಾನವನ್ನು ತಂದು ಕೆರೆ ಅಭಿವೃದ್ದಿ ಮಾಡುವ ವೇಳೆಯಲ್ಲಿ ಗ್ರಾಮಸ್ಥರು ಪಕ್ಷಾತೀತವಾಗಿ ಕಾಮಗಾರಿಯನ್ನು ವೀಕ್ಷಣೆ ಮಾಡಿ ತಪ್ಪುಗಳನ್ನು ಹೇಳಬೇಕಿತ್ತು. ಈ ಕಾಮಗಾರಿ ಕಳಪೆಯಾಗಿದೆ. ಜೊತೆಗೆ ಕೋಡಿಯೂ ಚಿಕ್ಕದಾಗಿದೆ” ಎಂದು ಆರೋಪಿಸಿದರು.
ಗ್ರಾಮದ ರೈತ ಮುಖಂಡ ರಾಮಕೃಷ್ಣೆಗೌಡ ಮಾತನಾಡಿ, “ಸಿಪಿವೈರಿಗೆ ಒತ್ತಾಯ ಮಾಡಿ ಕೆರೆ ಅಭಿವೃದ್ಧಿ ಮಾಡಿಸಲು ಹೊರಟಾಗ ಕುಮಾರಸ್ವಾಮಿ ಕೆರೆಗೆ ನಿರ್ಮಾಣಕ್ಕೆ ಅನುದಾನ ತಂದರು. ಆದರೆ ಕೆರೆಯನ್ನು ಪರಿಪೂರ್ಣ ಮಾಡಿಲ್ಲ. ಕೆರೆಯಲ್ಲೇ ಕಲ್ಲು ತೆಗೆದು ನಿರ್ಮಾಣ ಮಾಡಿದರು. ಕೆರೆ ಒಡೆದು ಹೋಗಿತ್ತು. ಈ ವೇಳೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಿ ಬಂದು ಕೆರೆ ಬಗ್ಗೆ ಪರಿಶೀಲನೆ ಮಾಡಿಲ್ಲ. ಕೆಆರ್‌ಎಸ್‌ನಿಂದ ಲಕ್ಷಾಂತರ ಟಿಎಂಸಿ ನೀರು ಹರಿದರೂ ಯಾರೂ ಕೇಳಿಲ್ಲ” ಎಂದು ಆರೋಪಿಸಿದರು.
ರೈತಮುಖಂಡ ಅಪ್ಪಾಜಿಗೌಡ ಮಾತನಾಡಿ, “ಈ ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ಮಾವು, ತೆಂಗು, ಬಾಳೆ ಸೇರಿದಂತೆ ಹಸಿರುಮಯವಾದ ಎಲ್ಲ ಬೆಳೆಗಳು ನಾಶವಾಗಿವೆ. ಗ್ರಾಮದ ಸಮಸ್ಯೆ ಬಗ್ಗೆ ಪ್ರತಿಭಟನೆ ಮಾಡಲು ಪಕ್ಕದ ಗ್ರಾಮದಿಂದ ಬಂದಿದ್ದೇವೆ. ಆದರೆ ಈ ಗ್ರಾಮದಲ್ಲಿ ನೀರನ್ನು ಪಡೆಯುವ ರೈತರೇ ಈ ಹೋರಾಟಕ್ಕೆ ಬಂದಿಲ್ಲ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜಕಾರಣ ಬದಿಗಿತ್ತು ಒಟ್ಟಾಗಿ ಗ್ರಾಮದ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡದಿದ್ದರೆ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಗುವದಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು ದಸರಾ ಉತ್ಸವ : ಸಿಎಂಗೆ ಆಹ್ವಾನ ನೀಡಿದ ಜಿಲ್ಲಾಧಿಕಾರಿ
ರಂಗಸ್ವಾಮಿ ಮಾತನಾಡಿ, “ಸರ್ಕಾರಗಳು ಕೆರೆಗಳಿಗೆ ನೀರನ್ನು ತುಂಬಿಸಲು ಮುಂದಾಗಬೇಕು. ಚುನಾವಣೆಗೆ ಬರುವ ರಾಜಕಾರಣಿಗಳಿಗೆ ಸಮಸ್ಯೆಗಳ ಅರಿವು ಮೂಡಿಸಲು ಚುನಾವಣೆಯನ್ನು ಬಹಿಷ್ಕಾರ ಮಾಡಬೇಕು” ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ರಂಜಿತ್‌ಗೌಡ, ತಾಲೂಕು ಉಪಾಧ್ಯಕ್ಷ ಮಹೇಶ್ ಮೆಣಸಿಗನಹಳ್ಳಿ, ರಾಮಕೃಷ್ಣಪ್ಪ, ಸಿದ್ದೇಗೌಡ, ಶಿವಣ್ಣ, ಚನ್ನೇಗೌಡ, ಸಿದ್ದ, ಯೋಗೇಶ್, ಮುನಿರಾಜು, ಕಾರ್ತಿಕ್, ಮೂಗಪ್ಪ, ಭಾಗ್ಯಮ್ಮ, ತಮ್ಮಣ್ಣ, ಹನುಮಂತರಾಯಪ್ಪ, ಬಸವಣ್ಣ, ತಸ್ಮಿಯಾಬಾನು ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.