ಚುನಾವಣೆಯಲ್ಲಿ ವಿಕಲಚೇತನರು ಮತ್ತು 85 ವರ್ಷ ದಾಟಿದ ನಾಗರಿಕರಿಗೆ ಮನೆಯಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದು, ತಾಲೂಕಿನ 352 ಮಂದಿ ನೋಂದಣಿ ಮಾಡಿಸಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ರಾಘವೇಂದ್ರ ತಿಳಿಸಿದರು.
ರಾಮನಗರ ಜಿಲ್ಲೆ ಕನಕಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
“ವಿಕಲಚೇತನರು ಮತ್ತು ಹಿರಿಯ ನಾಗರಿಕರ ಮತವನ್ನು ಏಪ್ರಿಲ್ 13 ಮತ್ತು 14 ರಂದು ಚುನಾವಣಾ ತಂಡವು ಮನೆಗೆ ಭೇಟಿ ನೀಡಿ ಪಡೆಯಲಿದೆ. ತಾಲೂಕಿನಲ್ಲಿ ಒಟ್ಟು 10 ತಂಡಗಳನ್ನು ಮಾಡಿದ್ದು, ಬೆಳಿಗ್ಗೆ 7.30ಕ್ಕೆ ಮನೆಗೆ ಭೇಟಿ ನೀಡಿ ಕಾರ್ಯ ನಿರ್ವಹಿಸಲಿದ್ದಾರೆ” ಎಂದರು.
“ಮನೆಗೆ ಭೇಟಿ ನೀಡಿ ಮತದಾನ ಮಾಡಿಸುವ ತಂಡಕ್ಕೆ ತರಬೇತಿ ನೀಡಲಾಗಿದೆ. ಮನೆ ಮತದಾನವನ್ನು ವಿಡಿಯೋ ಮಾಡಲಾಗುವುದು. ಮತದಾನಕ್ಕೆ ಮನೆಗಳಿಗೆ ಬರುವ ತಂಡಕ್ಕೆ ಸಂಪೂರ್ಣ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.
ಕನಕಪುರ ತಾಕಿನಲ್ಲಿ ಒಟ್ಟು 2,31,262 ಮಂದಿ ಮತದಾರರಿದ್ದಾರೆ. ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,72,896 ಮಂದಿ ಮತದಾರರಿದ್ದು, ಶೇ.85ರಷ್ಟು ಮತದಾನದ ಹಕ್ಕು ಪಡೆದಿದ್ದಾರೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ನಾಮಪತ್ರ ವಾಪಸ್ ಪಡೆದ ಬಿಎಸ್‌ಪಿ ಅಭ್ಯರ್ಥಿ; ಪಕ್ಷದಿಂದ ಉಚ್ಛಾಟನೆ
“ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 297 ಮತಗಟ್ಟೆ ಕೇಂದ್ರಗಳನ್ನು ಮಾಡಿದ್ದು, ಅದರಲ್ಲಿ 61 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾದರೆ ಕೋಡಿಹಳ್ಳಿ ಹೋಬಳಿಯ ಹಲಸೂರು ಮತ್ತು ಕಸಬಾ ಹೋಬಳಿಯ ನಾರಾಯಣಪುರ ಅತಿಸೂಕ್ಷ್ಮ ಮತಗಟ್ಟೆಗಳಾಗಿವೆ” ಎಂದರು.
ತಹಶೀಲ್ದಾರ್ ಡಾ ಸ್ಮಿತಾರಾಮ್ ಉಪಸ್ಥಿತರಿದ್ದರು.
