ಕೆಪಿಟಿಸಿಎಲ್ ಸಿಬ್ಬಂದಿಗಳೇ ವಿದ್ಯುತ್ ಕಂಬ ಹಾಗೂ ವೈರ್‌ಗಳನ್ನು ಕಳ್ಳತನ ಮಾಡಿದ್ದು, ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಮಾಹಿತಿ ಹಕ್ಕು ಬಳಕೆದಾರ ಸ್ವಾಮಿ ಎಚ್ ಎಸ್ ಎಂಬುವವರು ಬೆಂಗಳೂರಿನ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.
“ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹೊನ್ನಿಗನಹಳ್ಳಿ ಗ್ರಾಮದಿಂದ ಸಾತನೂರುವರೆಗೆ ಹಾಗೂ ಕೆಪಿಟಿಸಿಎಲ್ ಕಚೇರಿಯಿಂದ ಛತ್ರ ಗೇಟ್‌ವರೆಗೆ 66 ಕೆವಿ ವಿದ್ಯುತ್ ವೈರ್‌ಗಳು ಹಾಗೂ ಮರಗಳನ್ನು ಕಡಿದು ಆ ದಿಮ್ಮಿಗಳನ್ನೂ ಕೆಪಿಟಿಸಿಎಲ್ ಸಿಬಂದಿಗಳೇ ಕಳ್ಳತನ ಮಾಡಿದ್ದಾರೆ” ಎಂದರು.
“ಕನಕಪುರ ಕೆಪಿಟಿಸಿಎಲ್ ಕಚೇರಿಯ ಎಇಇ ರಜನೀಸ್ ಮತ್ತು ಅವರ ಸಿಬ್ಬಂದಿಗಳಾದ ಹರೀಶ್ ಹಾಗೂ ಗಿರೀಶ್ ಸೇರಿ 66 ಕೆವಿ ನಿಷ್ಕ್ರಿಯ ವಿದ್ಯುತ್ ಮರದ ಕಂಬ, ವೈರ್‌ಗಳನ್ನು ಅಕ್ರಮವಾಗಿ ಕಳ್ಳತನ ಮಾಡಿ ಮಾರಾಟ ಮಾಡಿದ್ದಾರೆಂದು ದೂರು ನೀಡಿ 6 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಳ್ಳತನ ನಡೆದ ಸ್ಥಳದ ಜಿಪಿಎಸ್ ಸಹಿತ ಫೋಟೋ ಹಾಗೂ ವಿಡಿಯೋಗಳ ಸಾಕ್ಷಿ ಕೊಟ್ಟಿದ್ದೇನೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ವಿಡಿಯೋ ಮಾಡಿಕೊಟ್ಟಿದ್ದೇನೆ. ಆದರೂ ಕ್ರಮಕೈಗೊಂಡಿಲ್ಲ. ನಾನು ನೀಡಿರುವ ಸಾಕ್ಷಿ ಆಧಾರಗಳ ಮೇಲೆ ಸ್ಥಳ ಪರಿಶೀಲಿಸಬೇಕು. ವಿಚಾರಣೆ ನಡೆಸಿ ಈ ಕೃತ್ಯದಲ್ಲಿ ಭಾಗಿಯಾದ ಸಿಬ್ಬಂದಿಗಳನ್ನು ಕೂಡಲೇ ಕರ್ತವ್ಯದಿಂದ ವಜಾಗೊಳಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪರಿಶಿಷ್ಟರಿಗೆ ಕಾಯ್ದಿರಿಸಿದ ಸ್ಮಶಾನ ಭೂಮಿ ರಕ್ಷಣೆ ಮಾಡಲು ಆಗ್ರಹಿಸಿ ಮನವಿ
ಕನಕಪುರ ಕೆಪಿಟಿಸಿಎಲ್‌ನ ಇಇ ಸುಜಾತ ಮಾತನಾಡಿ, “ಮಳೆ ಗಾಳಿಗೆ ಬಿದ್ದಂತಹ ವಿದ್ಯುತ್ ಕಂಬ ಹಾಗೂ ವೈರ್‌ಗಳನ್ನು ತಂದಿದ್ದೇವೆ. ಅವುಗಳನ್ನು ನಮ್ಮ ಉಗ್ರಾಣದಲ್ಲಿ ಸಂಗ್ರಹಿಸಿಟ್ಟಿದ್ದೇವೆ. ಇದರ ವರದಿಯನ್ನು ಮೇಲಧಿಕಾರಿಗಳಿಗೆ ನೀಡಿದ್ದೇವೆ. ಮಿಕ್ಕ ನಿಷ್ಕ್ರಿಯ ಕಂಬ ಹಾಗೂ ತಂತಿಗಳನ್ನು ತೆರವುಗೊಳಿಸಲು ಅನುದಾನ ಕೋರಿ ಸರ್ಕಾರಕ್ಕೆ ಕೋರಿದ್ದೇವೆ. ಅನುದಾನ ಬಂದ ಕೂಡಲೇ ತೆರವುಗೊಳಿಸಲಾಗುವುದು” ಎಂದರು.