ಸಮಾಜದ ದುರ್ಬಲ ವರ್ಗಗಳಿಗೆ ಉಚಿತವಾಗಿ ಕಾನೂನು ಸೇವೆಗಳ ನೆರವು ನೀಡುವುದು ಕಾನೂನು ಸೇವೆಗಳ ಪ್ರಾಧಿಕಾರದ ಪ್ರಮುಖ ಉದ್ದೇಶವಾಗಿದೆ ಎಂದು ರಾಮನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಬಿ ವಿ ರೇಣುಕ ತಿಳಿಸಿದರು.
ರಾಮನಗರದ ಎಂ ಎಚ್ ಕಾನೂನು ಕಾಲೇಜಿನಲ್ಲಿ ನವದೆಹಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಮನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾ ವಕೀಲರ ಸಂಘ ಹಾಗೂ ಎಂ ಎಚ್ ಕಾನೂನು ಕಾಲೇಜಿನ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
“ಈ ದಿನದಂದು ಒಕ್ಕೂಟದ ಹಲವೆಡೆ ಉಚಿತ ಕಾನೂನು ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದರ ಉದ್ದೇಶ ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಕಾನೂನು ಸೇವೆಗಳ ನೆರವು ನೀಡುವುದಾಗಿದೆ, ಮಹಿಳೆಯರು, ವಿಕಲಚೇತನರು, ಪರಿಶಿಷ್ಟ ಜಾತಿ, ಪಂಗಡದವರು, ಮಕ್ಕಳು ಹಾಗೂ ನೈಸರ್ಗಿಕ ವಿಕೋಪಕ್ಕೊಳಗಾಗಿ ನೊಂದವರಿಗೆ ಕಾನೂನಿನ ನೆರವು ನೀಡಿ, ಆ ಮೂಲಕ ಅವರಿಗೆ ಆತ್ಮವಿಶ್ವಾಸ ತುಂಬಿ ಕಾನೂನಾತ್ಮಕ ಪರಿಹಾರ ಕಲ್ಪಿಸಿಕೊಡುವ ಕೆಲಸ ಮಾಡಲಾಗುತ್ತಿದೆ” ಎಂದು ತಿಳಿಸಿದರು.
“ಭಾರತೀಯ ಸಂವಿಧಾನದ 39 ಎ ವಿಧಿಯ ಅಡಿಯಲ್ಲಿ ಭಾರತದ ಸಂಸತ್ತು, ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ-1987ನ್ನು ಅಂಗೀಕರಿಸಿ, 1995ರ ನವೆಂಬರ್ 9ರಂದು ಜಾರಿಗೆ ತಂದಿತು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದ ಆಧಾರದ ಮೇಲೆ ಶಾಲೆ ಕಾಲೇಜುಗಳಲ್ಲಿ, ಅದರಲ್ಲೂ ಮುಖ್ಯವಾಗಿ ಕಾನೂನು ಕಾಲೇಜುಗಳಲ್ಲಿ ಈ ದಿನಾಚರಣೆಯನ್ನು ಆಚರಿಸಲು ತೀರ್ಮಾನಿಸಿದ್ದೇವೆ. ನಮ್ಮ ಕರ್ನಾಟಕದಲ್ಲಿ 1995 ನವೆಂಬರ್ 9ರಂದು ರಾಜ್ಯ ಕಾನೂನು ಪ್ರಾಧಿಕಾರವು ಜಾರಿಗೆ ಬಂದಿತು. ಜಾರಿಗೆ ಬಂದ ಈ ಶಾಸನವನ್ನು ಗೌರವಿಸುವ ಸಲುವಾಗಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಆಚರಿಸುವುದು” ಎಂದರು.
“ಕಾನೂನು ಸೇವಾ ಪ್ರಾಧಿಕಾರಗಳ ಮುಖಾಂತರ ಯಾವ ವ್ಯಕ್ತಿಗೆ ಕಾನೂನಿನ ನೆರವು ಅಗತ್ಯ ಎಂಬುದನ್ನು ಗುರುತಿಸಿ ಆ ವ್ಯಕ್ತಿಗೆ ಕಾನೂನಿನ ನೆರವು ನೀಡುವುದು ಹಾಗೂ ಜನತಾ ನ್ಯಾಯಾಲಯದಿಂದ ಲೋಕಅದಾಲತ್‌ಗಳನ್ನು ಏರ್ಪಡಿಸಿ ಅವುಗಳಿಂದ ನ್ಯಾಯಾಲಯಗಳಲ್ಲಿ ಇತರೆ ಕಚೇರಿಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಉಳಿದಿರುವ ಪ್ರಕರಣಗಳನ್ನು, ಉಭಯ ಪಕ್ಷಗಳ ನಡುವೆ ರಾಜಿ ಸಂಧಾನ ಏರ್ಪಡಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಚೆಂಬುಗುಡ್ಡೆ ರಸ್ತೆ ಅವ್ಯವಸ್ಥೆ: ಗುಂಡಿ ಮುಚ್ಚಲು ಮಹಿಳೆಯ ಜೀವವೇ ಹೋಗಬೇಕಾಯಿತು!
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಸವಿತ ಪಿ ಆರ್ ಮಾತನಾಡಿ, “ದುರ್ಬಲ ವರ್ಗದವರಿಗೆ ಕಾನೂನು ಸೇವೆ ಒದಗಿಸುವುದು, ಆ ಮೂಲಕ ಸಮಾಜದಲ್ಲಿ ನ್ಯಾಯ ಪಡೆಯುವ ಹಕ್ಕನ್ನು ನ್ಯಾಯಯುತವಾಗಿ ಎಲ್ಲರಿಗೂ ಕಲ್ಪಿಸಿಕೊಡುವುದು ಈ ದಿನಾಚರಣೆಯ ಉದ್ದೇಶವಾಗಿದೆ” ಎಂದರು.
ಎಂ ಎಚ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಚ್ ಚಂದ್ರಶೇಖರ್, ಪ್ರಾಂಶುಪಾಲ ಗಂಗರಾಜ ಕೆ ಎಂ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ವಿ ಚಂದ್ರಶೇಖರ್, ಕಾರ್ಯದರ್ಶಿ ತಿಮ್ಮೇಗೌಡ ಎಸ್, ಖಜಾಂಚಿ ಮಂಜೇಶ್ ಗೌಡ ಆರ್ ಸಿ ಇದ್ದರು.