ದಬ್ಬಾಳಿಕೆಗೆ ಒಳಗಾದ ಮಹಿಳೆಯರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ, ಕೌನ್ಸೆಲಿಂಗ್ ಹಾಗೂ ಕಾನೂನು ನೆರವು ನೀಡಬೇಕು ಎಂದು ರಾಮನಗರ ಜಿಲ್ಲಾಧಿಕಾರಿ ಯಂಶವತ್ ವಿ ಗುರುಕರ್ ಅವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು.
ಆಗಸ್ಟ್ 28ರ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲಾ ಕೋಶ ಸಮಿತಿ ಸಭೆಯ ಮುಂದಾಳತ್ವ ವಹಿಸಿ ಮಾತನಾಡಿದರು.
“ಮಹಿಳೆಯರು ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಆಳಿಕೆಯ ಹಮ್ಮುಗೆಗಳ ಜತೆಗೆ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಬೇಕಾದ ತರಬೇತಿ ಕೊಡಿಸಬೇಕು. ಊರುಗಳಲ್ಲಿ ಬಾಲ್ಯವಿವಾಹಗಳು ಗುಟ್ಟಾಗಿ ನಡೆಯುತ್ತವೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ಬರುವುದು ಬಹಳ ಸಲ ತಡವಾಗುತ್ತದೆ. ಆ ರೀತಿಯ ಸನ್ನಿವೇಶಗಳು ಎದುರಾಗುವ ಮೊದಲೇ ಎಚ್ಚರಿಕೆ ವಹಿಸಬೇಕು. ಶಾಲೆ-ಕಾಲೇಜುಗಳಿಗೆ ಹೆಚ್ಚು ದಿನ ಗೈರಾಗುವ ಹುಡುಗಿಯರ ಬಗ್ಗೆ ಪ್ರಾಂಶುಪಾಲರು ಗಮನಿಸುತ್ತಿರಬೇಕು. ಒಂದು ವೇಳೆ ಗೈರಾಗುವ ಹುಡುಗಿಯರ ತಂದೆತಾಯಂದಿರು ಮದುವೆ ಮಾಡುತ್ತಿರುವುದು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಬೇಕು. ಯಾವುದೇ ಒತ್ತಡಗಳಿಗೆ ಅಧಿಕಾರಿಗಳು ಮಣಿಯದೆ ದೂರು ದಾಖಲಿಸಿಕೊಂಡು ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು” ಎಂದು ಎಚ್ಚರಿಕೆ ನೀಡಿದರು.
“ರಾಮನಗರ ಜಿಲ್ಲೆಯಲ್ಲಿರುವ 181 ಮಹಿಳಾ ಸಹಾಯವಾಣಿಗಳ ಮೂಲಕ ಏಪ್ರಿಲ್-2024ರಿಂದ ಜುಲೈ-2024ರವರೆಗೆ 08 ಕರೆಗಳು ಸ್ವೀಕೃತವಾಗಿದ್ದು, ಈ ಪ್ರಕರಣಗಳಿಗೆ ಪೊಲೀಸ್, ಕಾನೂನು ನೆರವು, ಆಪ್ತ ಸಮಲೋಚನೆ ಸೇವೆಯನ್ನು ಕೊಡಲಾಗಿದೆ” ಎಂದು ತಿಳಿಸಿದರು.
“ಸಮಾಜದಲ್ಲಿ ದಬ್ಬಾಳಿಕೆಗೆ ಒಳಗಾದ ಮಹಿಳೆಯರಿಗೆ ಆಳಿಕೆಯಿಂದ ಸಿಗುವ ಎಲ್ಲ ಹಮ್ಮುಗೆಗಳ ಬಗ್ಗೆ ತಿಳುವಳಿಕೆ ಕೊಡಬೇಕು. ಈಗಾಗಲೇ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳ ಮುಖಾಂತರ ನೊಂದ ಮಹಿಳೆಯರಿಗೆ ಯೋಜನೆಗಳು ತಲುಪುವಂತೆ ನೋಡಿಕೊಳ್ಳಬೇಕು” ಎಂದರು.
“ಸಮಾಜದಲ್ಲಿ ನೊಂದ ಮಹಿಳೆಯರು ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಆಳಿಕೆಯ ಏರ್ಪಾಟುಗಳನ್ನು ರೂಪಿಸಿದೆ. ಇವುಗಳಲ್ಲದೆ ಬೇರೆ ಬೇರೆ ಉದ್ದಿಮೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡಬೇಕು. ಇಲಾಖೆಗಳು ಇದಕ್ಕೆ ಬೇಕಾದ ತರಬೇತಿಯನ್ನು ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಡೆಸಬೇಕು. ಅನೇಕರು ಸಂಘ ಸಂಸ್ಥೆಗಳು ನಡೆಸುವ ಗಂಧದಕಡ್ಡಿ, ಮೇಣದಬತ್ತಿ, ಹಪ್ಪಳ, ಸಂಡಿಗೆ ತಯಾರಿಕಾ ಘಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಾದೇಶಿಕವಾಗಿ ಹೆಚ್ಚು ಮಾನ್ಯತೆ ಸಿಗಬಹುದಾದ ಉದ್ದಿಮೆಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕರ್ತವ್ಯ ಲೋಪ, ಸರ್ಕಾರದ ಹಣ ದುರುಪಯೋಗ : ವೈದ್ಯಾಧಿಕಾರಿ ಅಮಾನತು
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಡಿವೈಎಸ್‌ಪಿ ದಿನಕರ್ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ನಿರೀಕ್ಷಕಿ ಗಾಯಿತ್ರಿ ದೇವಿ ಬಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಜಿನಿ, ಜಿಲ್ಲೆಯ 5 ತಾಲೂಕುಗಳ ಶಿಶು ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಇತರರು ಇದ್ದರು.