ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕರ್ನಾಟಕ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ತೇರಿನ ಮೆರವಣಿಗೆ ಕನಕಪುರಕ್ಕೆ ಪಾದಾರ್ಪಣೆ ಮಾಡಿದ್ದು, ತಾಲ್ಲೂಕು ಆಡಳಿತ ಭವ್ಯವಾಗಿ ಸ್ವಾಗತಿಸಿದೆ.
ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸರ್ಕಲ್‌ನಿಂದ ಆರಂಭವಾದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಪೂಜಾ ಕುಣಿತ, ಮತ್ತು ತಮಟೆ ಕಲಾತಂಡಗಳ ಆಕರ್ಷಣೆಯೊಂದಿಗೆ ಸಾಗಿತು. ಸರ್ಕಾರದಿಂದ ಆಯೋಜಿಸಿದ್ದ ಸ್ತಬ್ಧಚಿತ್ರದ ಜತೆಗೆ ತಾಲೂಕು ಆಡಳಿತವೂ ಕೂಡಾ ಭುವನೇಶ್ವರಿ ದೇವಿಯ ಮತ್ತೊಂದು ಸ್ತಬ್ಧಚಿತ್ರವನ್ನು ಆಯೋಜಿಸಿದ್ದು ಕಣ್ಮನ ಸೆಳೆಯುವಂತಿತ್ತು.

ಅಧಿಕಾರಿ ವೃಂದದವರು ಹಾಗೂ ಕನ್ನಡಪರ ಸಂಘಟನೆಗಳ ಸಮ್ಮುಖದಲ್ಲಿ ತಹಶೀಲ್ದಾರ್ ಮಂಜುನಾಥ್ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಕನ್ನಡಪರ ಜಯಘೋಷಗಳೊಂದಿಗೆ, ಕಲಾತಂಡಗಳ ಪ್ರದರ್ಶನದೊಂದಿಗೆ ಕನಕಪುರದ ರಾಜಪಥದಲ್ಲಿ ಸಾಗಿದ ತೇರನ್ನು ಸಾರ್ವಜನಿಕರು ರಸ್ತೆಯ ಇಕ್ಕೆಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಂತು ನೋಡಿ ಸಂಭ್ರಮಿಸಿದರು. ಬಳಿಕ ಕನಕಪುರದ ವಾಣಿ ಟಾಕೀಸ್ ಸರ್ಕಲ್‌ನಲ್ಲಿ ಮೆರವಣಿಗೆ ಕೊನೆಗೊಂಡಿತು.
ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಕನ್ನಡ ತೇರನ್ನು ಬೀಳ್ಕೊಡುತ್ತ ಮಾತನಾಡಿ, “ಕನ್ನಡ ನುಡಿಯನ್ನು ಉಳಿಸಿ, ಬೆಳೆಸಿ ಸಿರಿವಂತಗೊಳಿಸುವುದರಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು, ಸರ್ಕಾರವು ಪ್ರತಿ ವರ್ಷ ಒಂದೊಂದು ಜಿಲ್ಲೆಯನ್ನು ಆಯ್ದು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ” ಎಂದರು.
ಇದನ್ನು ಓದಿದ್ದೀರಾ? ಮಂಡ್ಯ | ಶ್ರಮಜೀವಿ ಪೌರಕಾರ್ಮಿಕರು, ದಿಟವಾದ ಕಾಯಕಯೋಗಿಗಳು: ನಾಗೇಶ್
“ಮಂಡ್ಯದ ಸಂಸ್ಕೃತಿ ಸಾರುವಂತಹ ಸ್ತಬ್ದಚಿತ್ರವನ್ನು ಬಹಳ ಸುಂದರವಾಗಿ ನಿರ್ಮಿಸಿದ್ದು ಅರ್ಥಪೂರ್ಣವಾಗಿತ್ತು. 25 ವರ್ಷಗಳ ಹಿಂದೆ ಕನಕಪುರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿತ್ತು. ಕನಕಪುರದಲ್ಲಿ ಮತ್ತೊಮ್ಮೆ ಆಚರಿಸಲು ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಈ ಬಗ್ಗೆ ಆಲೋಚಿಸಬೇಕು” ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಜೆ.ಎಂ ಶಿವಲಿಂಗಯ್ಯ, ಕಸಾಪ ತಾಲೂಕು ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ, ಧಮ್ಮ ದೀವಿಗೆ ಟ್ರಸ್ಟ್‌ನ ಮಲ್ಲಿಕಾರ್ಜುನ್, ಪ್ರಶಾಂತ್ ಹೊಸದುರ್ಗ, ಕನ್ನಡ ಭಾಸ್ಕರ್, ಅಸ್ಗರ್ ಖಾನ್, ಕೂಗಿ ಗಿರಿಯಪ್ಪ, ಗ್ರೇಡ್ 2 ತಹಶೀಲ್ದಾರ್ ಶಿವಕುಮಾರ್, ನಗರಸಭೆ ಆಯುಕ್ತ ಮಹದೇವ್, ಕಾರ್ಯ ನಿರ್ವಾಣಾಧಿಕಾರಿ ಭೈರಪ್ಪ, ಸರ್ಕಾರಿ ನೌಕರರ ತಾಲೂಕು ಅಧ್ಯಕ್ಷ ನಂದೀಶ್, ಸಮಾಜ ಕಲ್ಯಾಣ ಅಧಿಕಾರಿ ಜಯಪ್ರಕಾಶ್, ಡೆಪ್ಯುಟಿ ತಹಶೀಲ್ದಾರ್ ಪ್ರವೀಣ್, ಕೂ ಗಿ ಗಿರಿಯಪ್ಪ, ಕಂದಾಯಾದಿಕಾರಿ ತಂಗರಾಜ್, ಪ್ರದೀಪ್, ವೆಂಕಟೇಶ್ ಗೌಡ , ಶಿವಣ್ಣ ಸೇರಿದಂತೆ ಬಹುತೇಕರು ಭಾಗವಹಿಸಿದ್ದರು.
