ಮನೆ, ಮನಗಳಲ್ಲಿ ನಿತ್ಯವೂ ಕನ್ನಡ ತನವನ್ನು ಆಚರಿಸುವ ದೀಕ್ಷೆ ತೊಡಬೇಕು. ಕನ್ನಡವನ್ನು ಭಾಷಾ ದೃಷ್ಟಿಕೋನದಿಂದಲ್ಲದೇ ಒಗ್ಗಟ್ಟು, ಸಂಸ್ಕೃತಿ, ಗೌರವ ಮತ್ತು ಅಭಿಮಾನದ ಪ್ರತೀಕವಾಗಿ ಕಾಣುವ ಮೂಲಕ ಕನ್ನಡವನ್ನು ಆಚರಿಸಬೇಕು ಎಂದು ಬಂಜಾರ ಭಾಷಾ ಸಂಸ್ಕೃತಿ ಮತ್ತು ಅಕಾಡೆಮಿಯ ಅಧ್ಯಕ್ಷ, ಅಂತಾರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಡಾ. ಎ ಆರ್ ಗೋವಿಂದಸ್ವಾಮಿ ತಿಳಿಸಿದರು.
ರಾಮನಗರದ ನ್ಯೂಎಕ್ಸ್‌ಪರ್ಟ್ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ, ಕನ್ನಡ ಹಬ್ಬ, ಮಕ್ಕಳ ದಿನಾಚರಣೆ ಹಾಗೂ ಎನ್‌ಎಸ್‌ಎಸ್ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
“ಪಠ್ಯೇತರ ಚಟುವಟಿಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸುಜ್ಞಾನ ಸಂಪಾದನೆಗೂ ಒತ್ತು ಕೊಡಬೇಕು. ನಿರಂತರ ಅಧ್ಯಯನ ಶೀಲತೆ, ಸೃಜನಶೀಲತೆ, ಸಮಾಜ ಸೇವಾ ಮನೋಭಾವ, ರಾಷ್ಟ್ರಾಭಿಮಾನ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಯುವಜನರು ಈ ನೆಲದ ಅಸ್ತಿತ್ವ ಗಟ್ಟಿಗೊಳಿಸುವ ನಾಯಕರಾಗಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲ ಡಾ. ಡಿ ಆರ್ ರವಿಕುಮಾರ್ ಮಾತನಾಡಿ, “ವಿದ್ಯಾರ್ಥಿಗಳು ಉನ್ನತ ಭವಿಷ್ಯವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಕಟ್ಟಿಕೊಳ್ಳುವ ಸಂಕಲ್ಪ ಮಾಡಬೇಕು. ಮಾತೃಭಾಷೆಯನ್ನು ಆರಾಧಿಸುವ, ಪ್ರೀತಿಸುವ ದೃಢಸಂಕಲ್ಪ ಮಾಡಬೇಕು” ಎಂದರು.
ರಾಮನಗರ ಕಸಾಪ ಅಧ್ಯಕ್ಷ ಬಿ ಟಿ ದಿನೇಶ್ ಬಿಳಗುಂಬ, ಚುಟುಕು ಕವಿ ಪೂರ್ಣಚಂದ್ರ, ಹಿರಿಯ ಗಾಯಕ ಚೌ ಪು ಸ್ವಾಮಿ, ಸಾಹಿತಿ ಡಾ ವಿಜಯ್ ರಾಂಪುರ, ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್‌ನ ಚಂದ್ರೇಗೌಡ ಮಾತನಾಡಿದರು.
ಇದನ್ನು ಓದಿದ್ದೀರಾ? ದೆಹಲಿ ಪೊಲೀಸರಿಂದ ಬೆಂಗಳೂರಿನಲ್ಲಿ ಅಕ್ರಮ ಚಟುವಟಿಕೆ : ದೂರು ದಾಖಲು
ವೇದಿಕೆಯಲ್ಲಿ ಉಪ ಪ್ರಾಂಶುಪಾಲ ಆರ್ ಚಂದ್ರಶೇಖರ್, ಸಹಾಯಕ ಪ್ರಾಧ್ಯಾಪಕರಾದ ದಯಾನಂದ ಸ್ವಾಮಿ, ಸುಮತಿಶ್ರೀ ಹಾಗೂ ಉಪನ್ಯಾಸಕ ವೃಂದದವರು ಇದ್ದರು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನೂರು ಅಡಿ ಉದ್ದದ ಕನ್ನಡ ಧ್ವಜ ಹಿಡಿದು ಕಲಾ ತಂಡಗಳೊಂದಿಗೆ ಗಣ್ಯರನ್ನು ವೇದಿಕೆಗೆ ಕರೆತರಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು.