ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಸೌಲಭ್ಯ, ಹಾಗೂ ಸೇವಾ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಕಂದಾಯ ಇಲಾಖೆ ಮುಷ್ಕರಕ್ಕೆ ನಮ್ಮ ಬೆಂಬಲವಿದೆ ಎಂದು ಕನಕಪುರದ ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಘೋಷಿಸಿದರು.
ಪತ್ರಿಕೆ ಹೇಳಿಕೆ ನೀಡಿರುವ ಅವರು, “ಕಂದಾಯ ಇಲಾಖೆ ಅಧಿಕಾರಿಗಳಿಗೆ ಮೊಬೈಲ್ ಆಪ್‌ಗಳಲ್ಲಿ ಕೆಲಸ ಮಾಡುವಂತೆ ಹೇರಲಾಗುತ್ತಿರುವ ಒತ್ತಡ ನಿಲ್ಲಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅನಿರ್ದಿಷ್ಟಾವಧಿಯ ಧರಣಿ ಸರಿಯಾಗಿದೆ.ಕಂದಾಯ ಇಲಾಖೆಯ ಅಧಿಕಾರಿಗಳ ಬೇಡಿಕೆಗಳು ನ್ಯಾಯಯುತವಾಗಿವೆ. ಅವುಗಳನ್ನು ತಕ್ಷಣ ಪರಿಹರಿಸಲು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮುಂದಾಗಬೇಕು. ಕಂದಾಯ ಸಚಿವರ ಮೇಲೆ ಅಗಾಧ ನಿರೀಕ್ಷೆ ಇಡಲಾಗಿತ್ತು. ಸಚಿವರು ಇತ್ತ ಅಧಿಕಾರಿಗಳಿಗೂ, ಅತ್ತ ರೈತರಿಗೂ ಬಿಸಿ ತುಪ್ಪವಾಗಿದ್ದಾರೆ” ಎಂದು ಹೇಳಿದರು
“ಕಂದಾಯ ಇಲಾಖೆಯ ನೌಕರರು ಕಳೆದ 4 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಬಹು ಮುಖ್ಯ ಇಲಾಖೆಯಾದ ಕಂದಾಯ ಕಚೇರಿಗೆ ನಿತ್ಯವೂ ರೈತರು, ಜನಸಾಮಾನ್ಯರು ಸಾವಿರಾರು ರೂ ಹಣ ವ್ಯಯಿಸಿ ಬಂದರೂ ಅಧಿಕಾರಿಗಳು ಇರದ ಕಾರಣ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತ ತೆರಳುತ್ತಿದ್ದಾರೆ. ಇತ್ತ ಸಚಿವರು ಇದರ ಪರಿವೆಯೇ ಇಲ್ಲದಂತೆ ಮುಖ್ಯಮಂತ್ರಿಗಳ ಮುಡಾ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತ ಟೀಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ” ಎಂದು ಆರೋಪಿಸಿದರು.
ಗ್ಯಾರಂಟಿ ಯೋಜನೆಗಳ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇತ್ತ ಗ್ಯಾರಂಟಿಗಳನ್ನೂ ನೀಡಲಾಗದೆ, ಅತ್ತ ಅಭಿವೃದ್ಧಿಯನ್ನೂ ಮಾಡಲಾಗದೆ ಜನರನ್ನು ತ್ರಿಶಂಕು ಸ್ಥಿತಿಯಲ್ಲಿ ನರಳಾಡುವಂತೆ ಮಾಡುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಮಾಜದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಬಹುಮುಖ್ಯ: ಆಂತೋನಿ ಸಿ
“ನೂತನ ಜಿಲ್ಲಾಧಿಕಾರಿಗೆ ಪ್ರತಿಭಟನೆ ಎಂದರೆ ಅಲರ್ಜಿ. ಕಂದಾಯ ಇಲಾಖೆಯ ಅಧಿಕಾರಿಗಳ ಮುಷ್ಕರಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತಿದ್ದಾರೆ. ಕಣ್ಣಿಗೆ ಕಾಣದಷ್ಟು ದೂರದಲ್ಲಿ ಅದಕ್ಕೆಂದೇ ಪ್ರತಿಭಟನೆಯನ್ನು ವರ್ಗಾಹಿಸಿ ಆರಾಮಾಗಿದ್ದಾರೆ. ರಾಮನಗರವು ಇಂತಹ ಅಸಮರ್ಥ ಜಿಲ್ಲಾಧಿಕಾರಿಯನ್ನು ಈವರೆಗೂ ಕಂಡಿರಲಿಲ್ಲ. ರೈತರ ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ನೋಡಿಯಾದರೂ ಕಂದಾಯ ಇಲಾಖೆಯ ಅಧಿಕಾರಿಗಳ ಮನ ಒಲಿಸಲಿ, ಇಲ್ಲದಿದ್ದರೆ ಪ್ರಗತಿಪರ ಸಂಘಟನೆಗಳು ಜನರಿಗಾಗುತ್ತಿರುವ ಸಮಸ್ಯೆಗಳ ವಿರುದ್ದ ಬೀದಿಗಿಳಿದು ಹೋರಾಡಲು ಸಿದ್ದರಿದ್ದೇವೆ” ಎಂದು ಎಚ್ಚರಿಕೆ ನೀಡಿದರು.