“ಲಿಂಗವೆಂಬುದು ದೈಹಿಕ ಲಕ್ಷಣಕ್ಕೆ ಸೀಮಿತವಾಗಿರಬಹುದಾದರೂ ನಮ್ಮೊಳಗಿನ ವ್ಯಕ್ತಿತ್ವಕ್ಕೆ ಲಿಂಗಭೇದವಿಲ್ಲ” ಎಂದು ರಾಮನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಬಿ.ವಿ. ರೇಣುಕ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನ.14ರ ಗುರುವಾರ ರಾಮನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನವದೆಹಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಎಲ್‌ಜಿಬಿಟಿಕ್ಯೂಐಎ+ ಸಮುದಾಯದ ಸದಸ್ಯರ ಹಕ್ಕುಗಳು ಮತ್ತು ಸವಲತ್ತುಗಳ ಕುರಿತು, ಪ್ಯಾನಲ್ ವಕೀಲರು, ಕಾನೂನು ನೆರವು ಅಭಿರಕ್ಷಕರು, ಅರೆಕಾಲಿಕ ಕಾನೂನು ಸ್ವಯಂಸೇವಕರು ಮತ್ತು ಎಲ್‌ಜಿಬಿಟಿಕ್ಯೂಐಎ+ ಸಮುದಾಯದವರಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪುರಾಣ ಕಾಲದಿಂದಲೂ ಅರ್ಧನಾರೀಶ್ವರ ಪರಿಕಲ್ಪನೆ ಮೂಲಕ ಗಂಡಿನಲ್ಲಿ ಹೆಣ್ಣಿನ ಗುಣ, ಹೆಣ್ಣಿನಲ್ಲಿ ಗಂಡಿನ ಗುಣ ನೋಡುತ್ತಾ ಬಂದಿದ್ದೇವೆ. ಇದರ ಅರ್ಥ ಸಮಾನತೆ ಎನ್ನುವುದು ಎಲ್ಲರಿಗೂ ಅನ್ವಯವಾಗುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಸಮಾಜದಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ನೀಡಿ ಗೌರವಿಸಬೇಕು ಎಂದರು.
ಭಾರತೀಯ ನ್ಯಾಯಾಂಗವು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳನ್ನು ಕಾನೂನಾತ್ಮಕವಾಗಿ ಕಾಪಾಡಲು ಮುಂಚೂಣಿಯಲ್ಲಿದೆ. ಸುಪ್ರೀಂ ಕೋರ್ಟ್ ನೀಡಿರುವ ಪ್ರಮುಖ ತೀರ್ಪುಗಳಲ್ಲಿ “ಸುಪ್ರಿಯಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ” ಪ್ರಕರಣವು ತೃತೀಯ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಪ್ರಜಾಪ್ರಭುತ್ವದ ಹಕ್ಕುಗಳನ್ನು ಒಪ್ಪಿಕೊಂಡಿರುವುದು ಬಹುಮುಖ್ಯವಾಗಿದೆ. ಇಂತಹ ತೀರ್ಪುಗಳು ತೃತೀಯ ಲಿಂಗ ಸಮುದಾಯದ ಸ್ವಾತಂತ್ರ್ಯ ಮತ್ತು ಗೌರವವನ್ನು ಕಾಪಾಡಲು ಸೂಕ್ತ ಮಾರ್ಗದರ್ಶಕವಾಗಿವೆ ಎಂದು ಅಭಿಪ್ರಾಯಪಟ್ಟರು.
2022ರಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ತೃತೀಯ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಅರ್ಹವಾದ ಸವಲತ್ತುಗಳನ್ನು ತಲುಪಿಸಲು ಪ್ರಗತಿಪರ ಯೋಜನೆಗಳನ್ನು ರೂಪಿಸಿದೆ. ಮಂಗಳಮುಖಿ ಸಮುದಾಯಕ್ಕೆ ಉದ್ಯೋಗ ಮೀಸಲಾತಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಇತ್ಯಾದಿ ಸೌಲಭ್ಯಗಳ ಒದಗಿಸುವ ನಿಟ್ಟಿನಲ್ಲಿ ಸಹಾಯ ಹಸ್ತ ಚಾಚಿದೆ. ಈ ಯೋಜನೆಗಳು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಸಮಾನ ಹಕ್ಕುಗಳಿಂದ ಸಮಾಜದಲ್ಲಿ ಬಾಳಲು ನೆರವಾಗುತ್ತವೆ ಎಂದರು.
ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರಲ್ಲಿ ಸಾಮಾಜಿಕ ನ್ಯಾಯದ ಅರಿವು ಮೂಡಿಸಲು, ಕಾನೂನು ನೆರವು, ಹಾಗೂ ತಮಗೆ ಸಿಗುವ ಹಕ್ಕುಗಳನ್ನು ಕುರಿತು ಅರಿವನ್ನು ಹೆಚ್ಚು ಮಾಡಲು ದೇಶಾದ್ಯಾಂತ ಪ್ರಾಧಿಕಾರವು ಮುನ್ನಡೆಯುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವು ಕಾನೂನು ಸೇವಾ ಪ್ರಾಧಿಕಾರದಿಂದ ಸಹಾಯ ಪಡೆಯಲು ಮುಂದೆ ಬರುತ್ತಿರುವ ಉದಾಹರಣೆಯಾಗಿ, ಕಳೆದ ಐದು ವರ್ಷಗಳಲ್ಲಿ 46 ಮಂದಿ ಸದಸ್ಯರು ಸರ್ಕಾರದ ಸೇವೆಗಳನ್ನು ಪಡೆದಿದ್ದಾರೆ ಎಂದರು.
2014ರಲ್ಲಿ ಸುಪ್ರೀಂ ಕೋರ್ಟ್ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರಿಗೂ ಪುರುಷ ಮತ್ತು ಮಹಿಳೆಯರಂತೆ ಸಮಾನ ಮೂಲಭೂತ ಹಕ್ಕುಗಳು ಇವೆ ಎಂದು ಮಹತ್ವದ ತೀರ್ಪನ್ನು ನೀಡಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಇರುವ ವಿವಾಹ, ದತ್ತು, ಮತ್ತು ವಿಚ್ಛೇಧನದ ಹಕ್ಕುಗಳನ್ನು ಕಾಪಾಡಲು ಸರ್ಕಾರವು ಬದ್ಧವಾಗಿದೆ. ಲೈಂಗಿಕತೆ ಹಾಗೂ ಲಿಂಗ ತಾರತಮ್ಯ ತೋರಲು ಯಾರೂ ಬಾಧ್ಯರಲ್ಲ ಎಂಬ ತೀರ್ಪು, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರ ಬದುಕಿಗೆ ಹೊಸ ಆಶಾಕಿರಣವನ್ನೊದಗಿಸಿದೆ ಎಂದರು.
ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಜನರು ಭಯ, ನಾಚಿಕೆ, ಸಾಮಾಜಿಕ ಭೇದ, ಖಿನ್ನತೆ, ಆತ್ಮಹತ್ಯೆಗೆ ಪ್ರಯತ್ನಿಸುವ ಪ್ರವೃತ್ತಿ, ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆಗೆ ಬಲವಂತದ ಒತ್ತಾಯ, ಮುಂತಾದ ಸಮಸ್ಯೆಗಳು ಗಂಭೀರ ಸ್ವರೂಪದ್ದು. ಇವುಗಳ ವಿರುದ್ಧ ಹೋರಾಡಲು ಸಮಾಜ ಮತ್ತು ಸಮುದಾಯದವರು ಒಟ್ಟಾಗಿ ಕೈಜೋಡಿಸಬೇಕು ಎಂದರು.
ಇದನ್ನು ಓದಿದ್ದೀರಾ? ಆಪರೇಷನ್ ಕಮಲ | ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್; ಬಿಜೆಪಿ ಅಧಿಕಾರ ದಾಹಕ್ಕೆ ರಾಜ್ಯಗಳು ಬಲಿ!
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸವಿತ ಪಿ.ಆರ್., 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ತಮ್ಮಣ್ಣ ಸಿ., ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ವಿ. ಚಂದ್ರಶೇಖರ್, ಕಾರ್ಯದರ್ಶಿಗಳಾದ ತಿಮ್ಮೇಗೌಡ ಎಸ್, ಖಜಾಂಚಿ ಮಂಜೇಶ್ ಗೌಡ ಆರ್.ಸಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಒಂದಡೆ ಸಂಸ್ಥೆಯ ಖಜಾಂಚಿ ರಕ್ಷಿತ ಮಲ್ಲಿಕಾರ್ಜುನ, ಎಲ್‌ಜಿಬಿಟಿಕ್ಯೂಐಎ+ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.