ಯುವತಿಯೊಂದಿಗೆ ಅಸಭ್ಯ ವರ್ತನೆ ಹಾಗೂ ಲಾರಿ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ನಡೆದು, ಅವರನ್ನು ಸಮಾಧಾನಿಸಲು ಮಧ್ಯಸ್ಥಿಕೆ ವಹಿಸಲು ಹೋದವನನ್ನೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮಂಜುನಾಥ್ ಸೇರಿದಂತೆ 17 ಮಂದಿ ಆರೋಪಿಗಳನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಮನಗರ ತಾಲೂಕಿನ ವಡ್ಡರದೊಡ್ಡಿ ಗೇಟ್ ಬಳಿ ಮೇ.25ರ ಮಧ್ಯರಾತ್ರಿ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ಮಂಜುನಾಥ್(29) ಎಂಬಾತ ಬರ್ಬರವಾಗಿ ಹತ್ಯೆಯಾಗಿದ್ದ.
ಘಟನೆ ಹಿನ್ನೆಲೆ
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ ದೊಡ್ಡಿ ನಿವಾಸಿ ರಘು, ರಾಮನಗರ ತಾಲೂಕಿನ ಬೆಣ್ಣಹಳ್ಳಿ ನಿವಾಸಿ ಮಂಜುನಾಥ್ ಎಂಬುವವರು ಕಳೆದ ಹಲವು ವರ್ಷಗಳಿಂದ ಪರಿಚಯಸ್ಥರು. ರಘು ಎಂಬಾತನ ಟಿಪ್ಪರ್ ಲಾರಿಗಳನ್ನು ಬಾಡಿಗೆ ಪಡೆದಿದ್ದ ಆರೋಪಿ ಮಂಜುನಾಥ್ ಜಲ್ಲಿ, ಡಸ್ಟ್, ಕ್ರಷರ್ಗಳನ್ನು ತುಂಬಿಸಿ ಮಾರಾಟ ಮಾಡುತ್ತಿದ್ದ.
ಕಳೆದ ಹಲವು ತಿಂಗಳಿಂದ ಇಬ್ಬರೂ ಚೆನ್ನಾಗಿಯೇ ಇದ್ದರು. ಆದರೆ, ಈ ಮಧ್ಯೆ ತನ್ನದೇ ಗ್ರಾಮದ ಯುವತಿಯನ್ನು ಪ್ರೀತಿಸಿದ್ದ ಆರೋಪಿ ಮಂಜುನಾಥ್, ಆಕೆಯನ್ನು ಕರೆದೊಯ್ದು ಕೆ.ಎಂ ದೊಡ್ಡಿಯಲ್ಲಿ ಮನೆ ಮಾಡಿಕೊಂಡಿದ್ದ. ಆಕೆಯೊಂದಿಗೆ ರಘು ಅನುಚಿತವಾಗಿ ವರ್ತಿಸಿದ್ದಾನೆ ಎಂಬ ವಿಚಾರಕ್ಕೆ ರಘು ಹಾಗೂ ಮಂಜುನಾಥ್ ನಡುವೆ ಗಲಾಟೆ ನಡೆದಿತ್ತು.
ಇದೇ ವಿಚಾರವಾಗಿ ರಘು ಎಂಬಾತ ಮೇ 22ರಂದು ಕೆ.ಎಂ ದೊಡ್ಡಿ ಠಾಣೆಯಲ್ಲಿ ಮಂಜುನಾಥ್ ಹಾಗೂ ಯುವತಿ ವಿರುದ್ದ ದೂರು ನೀಡಿದ್ದ. ಈ ವಿಚಾರಕ್ಕೆ ಸಿಟ್ಟಾದ ಆರೋಪಿ ಮಂಜುನಾಥ್, ರಘುಗೆ ಸಂಬಂಧಿಸಿದ ಟಿಪ್ಪರ್ ಲಾರಿಯನ್ನು ಮೇ.25ರಂದು ಚಾಲಕ ಬಸವಣ್ಣ ಎಂಬಾತನಿಂದ ಕಿತ್ತುಕೊಂಡು ಹೋಗಿ ಅಜ್ಞಾತ ಸ್ಥಳದಲ್ಲಿ ನಿಲ್ಲಿಸಿದ್ದ. ಇದರಿಂದ ಕುಪಿತಗೊಂಡ ರಘು ಎರಡು ಕಾರಿನಲ್ಲಿ ತನ್ನ ಸ್ನೇಹಿತರನ್ನು ಕರೆದುದೊಯ್ದು ಗಲಾಟೆ ಮಾಡಿದ್ದ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ವಚ್ಛಗೊಳಿಸುವಾಗ ಮ್ಯಾನ್‌ಹೋಲ್‌ಗೆ ಬಿದ್ದ ಸ್ವಚ್ಛತಾ ಸಿಬ್ಬಂದಿ; ಬೆನ್ನು ಮೂಳೆ ಮುರಿತ
ಗಲಾಟೆ ವೇಳೆ, ರಘುಗೆ ಚಾಕುವಿನಿಂದ ಹಲ್ಲೆ ಮಾಡಲು ಆರೋಪಿ ಮುಂದಾಗಿದ್ದಾನೆ. ಈ ವೇಳೆ, ಅಡ್ಡ ಬಂದ ರಘು ಸ್ನೇಹಿತ ಮಂಜುನಾಥ್ ಎದೆಗೆ ಆರೋಪಿ ಮಂಜುನಾಥ್ ಚುಚ್ಚಿದ್ದಾನೆ. ಸ್ಥಳದಲ್ಲೇ ಮಂಜುನಾಥ್ ಸಾವನ್ನಪ್ಪಿದ್ದಾನೆ. ಸ್ಥಳದಿಂದ ಆರೋಪಿ ಮಂಜುನಾಥ್ ಸೇರಿದಂತೆ ರಘು ಮತ್ತಾತನ ಸ್ನೇಹಿತರು ಪರಾರಿಯಾಗಿದ್ದರು. ಇದೀಗ, ಅವರೆಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.