ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಯುವ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ಬುಧವಾರ ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, “ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸಮಾನವಾದ ತೆರಿಗೆ ಹಂಚಿಕೆ ಮಾಡಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯಕ್ಕೆ ತೆರಿಗೆ ಹಣ ಹಂಚಿಕೆಯಲ್ಲಿ ತಾರತಮ್ಯ ಮಾಡಿ ಧೋರಣೆ ಅನುಸರಿಸುತ್ತಿದೆ” ಎಂದು ಆರೋಪಿಸಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ತಾಲೂಕಿನಲ್ಲಿ ಪಂಜಿನ ಮೆರವಣಿಗೆ ನಡೆಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕೆಲಸ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕುದೂರು ವಿನಯ್ ಮಾತನಾಡಿ, “ಕೇಂದ್ರ ಬಿಜೆಪಿ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುವ ಮೂಲಕ ದ್ರೋಹ ಮಾಡುತ್ತಿದೆ. ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನ ₹308 ಲಕ್ಷ ಕೋಟಿಯಲ್ಲಿ ಕರ್ನಾಟಕಕ್ಕೆ ನೀಡಿದ ಎನ್‌ಡಿಎಫ್‌ಆರ್‌ನ ಅನುದಾನ ಕೇವಲ ₹3708.14 ಕೋಟಿ ಮಾತ್ರ. ಈ ಮೂಲಕ ಧೋರಣೆ ನೀತಿ ಅನುಸರಿಸುತ್ತಿದೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಗದಗ | ಎಸ್‌ಎಫ್‌ಸಿ ವಿಶೇಷ ಅನುದಾನದ ಸಮರ್ಪಕ ಹಂಚಿಕೆಗೆ ಆಗ್ರಹ
“2022-23ರಲ್ಲಿ ಕರ್ನಾಟಕಕ್ಕೆ ಬರ ಪರಿಹಾರವಾಗಿ ₹17,901,73 ಕೋಟಿ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರ ಈವರೆಗೂ ಸಮರ್ಪಕ ಅನುದಾನ ನೀಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯ ಎಚ್ ಜೆ ಪುರುಷೋತ್ತಮ್, ಬಿಡದಿ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ, ಸುರೇಶ್, ಅಬೀದ್, ರಂಗನಾಥ್, ಬಲರಾಮ ಸೇರಿದಂತೆ ಇತರರು ಇದ್ದರು.