ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಕೈಹಿಡಿದರು. ಇದರೊಂದಿಗೆ ಚನ್ನಪಟ್ಟಣ ಉಪ ಚುನಾವಣೆಗೆ ಸಿ ಪಿ ಯೋಗೇಶ್ವರ್ ಕಾಂಗ್ರೆಸ್‌ನ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಲಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಿಂದ ಚನ್ನಪಟ್ಟಣ ಉಪ ಚುನಾವಣೆ ಮತ್ತಷ್ಟು ರಂಗೇರಲಿದೆ. ಎರಡು ದಿನಗಳ ಹಿಂದೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿ ಪಿ ಯೋಗೇಶ್ವರ್ ಇಂದು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವ್ಯಕ್ತಿ, ಕುಟುಂಬ, ಜಾತಿ ಪ್ರತಿಷ್ಠೆಯ ಕಣ ಚನ್ನಪಟ್ಟಣ
ಡಿಸಿಎಂ ನಿವಾಸದಿಂದ ಇಬ್ಬರು ಒಂದೇ ಕಾರಿನಲ್ಲಿ ತೆರಳಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಗುರುವಾರ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಘೋಷಣೆ ಮಾಡಿರುವ ಸಿಪಿ ಯೋಗೇಶ್ವರ್ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತಾರಾ, ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಾರಾ, ಬಿಎಸ್‌ಪಿ ಅಥವಾ ಎಸ್‌ಪಿಯತ್ತ ಮುಖ ಮಾಡುತ್ತಾರಾ ಎಂಬುದು ತೀವ್ರ ಕುತೂಹಲ ಕೆರಳಿಸಿತ್ತು. ಈಗ ಕಾಂಗ್ರೆಸ್ ಸೇರ್ಪಡೆಯೊಂದಿಗೆ ಎಲ್ಲದಕ್ಕೂ ತೆರೆಬಿದ್ದಿದೆ.
ಸಿ ಪಿ ಯೋಗೇಶ್ವರ್ ಬಿಜೆಪಿ ಚಿಹ್ನೆ ಅಡಿಯಲ್ಲೇ ಸ್ಪರ್ಧೆ ಮಾಡಲು ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ, ಕ್ಷೇತ್ರವನ್ನು ಬಿಟ್ಟುಕೊಡಲು ಜೆಡಿಎಸ್‌ನ ಹೆಚ್ ಡಿ ಕುಮಾರಸ್ವಾಮಿ ಸಿದ್ದರಿರಲಿಲ್ಲ. ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟುಕೊಡಬಾರದು ಎಂಬುವುದು ಜೆಡಿಎಸ್ ಕಾರ್ಯಕರ್ತರ ಪಟ್ಟಾಗಿತ್ತು. ಈಗ ಜೆಡಿಎಸ್ – ಬಿಜೆಪಿ ಮೈತ್ರಿ ಪಕ್ಷದಿಂದ ಯಾರು ಚನ್ನಪಟ್ಟಣಕ್ಕೆ ಅಭ್ಯರ್ಥಿಯಾಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

Election ನಂತರ ಪುನಃ ಬಿಜೆಪಿ ಸೇರಬಹುದು. ಕಾದು ನೋಡಿ.