ಚಿಂತಾಮಣಿ ನಗರದ ಅಶ್ವಿನಿ ಬಡಾವಣೆಯಲ್ಲಿ ಇತ್ತೀಚೆಗೆ ಕೊಲೆಯಾಗಿದ್ದ ಜೆಸಿಬಿ ಮಾಲೀಕ ರಾಮಸ್ವಾಮಿ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುಲ್ಬರ್ಗ ಮೂಲದ ಚಾಲಕ ನಾಗೇಶ್ ಕೊಲೆ ಮಾಡಿರುವ ಆರೋಪಿ. ಜೆಸಿಬಿ ಚಾಲಕನಾಗಿದ್ದ ನಾಗೇಶ್ ವರ್ಷಗಳಿಂದ ರಾಮಸ್ವಾಮಿ ಬಳಿ ಕೆಲಸ ಮಾಡುತ್ತಿದ್ದ. ದಿನಕ್ಕೆ ಸಾವಿರ ರುಪಾಯಿ ದಿನಗೂಲಿ ಕೊಡುತ್ತಿದ್ದರು.
ಕಳೆದ ಒಂದು ವರ್ಷದಿಂದ ರಾಮಸ್ವಾಮಿ ಚಾಲಕ ನಾಗೇಶ್ ಗೆ ವೇತನ ಕೊಡದೆ ಸತಾಯಿಸುತ್ತಿದ್ದರು. ಸುಮಾರು 1.80ಲಕ್ಷ ವೇತನ ಬಾಕಿ ಇತ್ತು. ಕೊಲೆ ನಡೆದ ಹಿಂದಿನ ದಿನ ಇದೆ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ನಾಗೇಶ್ ವೇತನ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಕೊನೆಗೂ ಹಣ ಸಿಗದ ಕಾರಣ ಸಿಟ್ಟಿಗೆದ್ದಿದ್ದ ಆರೋಪಿ ನಾಗೇಶ್ ಫೆಬ್ರವರಿ 13ರಂದು ರಾತ್ರಿ 9.30ರ ಸುಮಾರಿಗೆ ರಾಮಸ್ವಾಮಿ ಮನೆಗೆ ಹೋಗುವಾಗ ಬೈಕ್ ಅಡ್ಡಗಟ್ಟಿ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ರಕ್ತಸ್ರಾವದಿಂದ ರಾಮಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಇದನ್ನೂ ಓದಿ : ಚಿಂತಾಮಣಿ | ಜಿಸಿಬಿ ರಾಮಸ್ವಾಮಿ ಕೊಲೆ
ಕೂಡಲೇ ಎಚ್ಚೆತ್ತುಕೊಂಡಿದ್ದ ಎಸ್ಪಿ ಕುಶಾಲ್ ಚೌಕ್ಸೆ ವಿಶೇಷ ತಂಡ ರಚಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಆರೋಪಿ ವಿಳಾಸ ತಿಳಿದುಕೊಂಡು, ಮೊಬೈಲ್ ಅಡ್ರೆಸ್ ಟ್ರ್ಯಾಕ್ ಮಾಡಿದ್ದ ತಂಡ ಗುಲ್ಬರ್ಗ ಪೊಲೀಸರ ನೆರವು ಪಡೆದು ರಾತ್ರಿ 10.30 ವೇಳೆಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.