ಹಾಲು ಉತ್ಪಾದಕರ ಸಂಘದ ಚುನಾವಣೆಗಾಗಿ ತೆರಳುತ್ತಿದ್ದ ಅಧಿಕಾರಿಗಳನ್ನು ಅಡ್ಡಗಟ್ಟಿ, ಮತದಾನದ ಬ್ಯಾಲೆಟ್ ಪೇಪರ್‌ಗಳನ್ನು ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮಾಗಡಿ ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಸೆ.27ರಂದು ಚುನಾವಣೆ ನಡೆಯಬೇಕಿತ್ತು. ಚುನಾವಣೆ ನಡೆಸಲು ಐವರು ಅಧಿಕಾರಿಗಳು ಬ್ಯಾಲೆಟ್ ಪೇಪರ್ ಮತ್ತು ಚುನಾವಣಾ ಪರಿಕರಗಳನ್ನು ತೆಗೆದುಕೊಂಡು ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ, ಮಾರ್ಗ ಮಧ್ಯದಲ್ಲಿ ಅವರನ್ನು ಅಡ್ಡಗಟ್ಟಿದ ಐವರು ದುಷ್ಕರ್ಮಿಗಳ ಗುಂಪು ಅಧಿಕಾರಗಳ ಮೇಲೆ ಹಲ್ಲೆ ನಡೆಸಿದೆ. ಚುನಾವಣಾ ಪರಿಕರಗಳನ್ನು ಕಿತ್ತುಕೊಂಡು ಪರಾರಿಯಾಗಿದೆ. ಚುನಾವಣೆ ತಡೆಯುವ ಉದ್ದೇಶದಿಂದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಚುನಾವಣೆಯಲ್ಲಿ ಸೋಲುವ ಭಯದಿಂದ ಗ್ರಾಮದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಲರಾಮ್ ಹಾಗೂ ಅವರ ಬೆಂಬಲಿಗರ ತಂಡವು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಹುಲ್ಲೇನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಕಳೆದ 23 ವರ್ಷಗಳಿಂದ ನಡೆದಿರಲಿಲ್ಲ. ಈ ಬಾರಿ ಸರ್ಕಾರವೆ ಚುನಾವಣೆ ನಡೆಸಲು ಮುಂದಾದ ಕಾರಣದಿಂದಾಗಿ ಚುನಾವಣೆ ನಿಗದಿಯಾಗಿತ್ತು. ಆದರೆ, ದುಷ್ಕರ್ಮಿಗಳ ದಾಳಿಯಿಂದ ಚುನಾವಣೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.