ದಲಿತ ಮುಖಂಡರಿಗೆ ಅಪಮಾನಿಸಿದ್ದ ವಕೀಲರ ವಿರುದ್ಧ ದೂರು ಕೊಟ್ಟರೂ, ಪೊಲೀಸರು ಪ್ರಕರಣ ದಾಖಲಿಸಿಲ್ಲ. ಪೊಲೀಸರು ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಿ ರಾಮನಗರದ ಐಜೂರು ಪೊಲೀಸ್ ಠಾಣೆಯ ಪಿಎಸ್‌ಐ ವಿರುದ್ಧ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿದೆ.
ರಾಮನಗರದ ಐಜೂರು ಸರ್ಕಲ್‌ನಲ್ಲಿ ಮಂಗಳವಾರ ಒಕ್ಕೂಟದ ಮುಖಂಡರು ಮತ್ತು ಕಾರ್ಯಕರ್ತರು ತಮಟೆ ಚಳುವಳಿ ನಡೆಸಿ, ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಮತ್ತೊಂದೆಡೆ, ಜಿಲ್ಲಾಧಿಕಾರಿ ಕಚೇರಿಯ ಬಳಿಯೇ ವಕೀಲರ ಸಂಘದ ಸದಸ್ಯರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ವಕೀಲರ ಸಂಘದ 40 ಮಂದಿ ವಕೀಲರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ವಕೀಲರ ಪ್ರತಿಭಟನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಬೆಂಬಲ ನೀಡಿದ್ದಾರೆ. ಸೋಮವಾರ ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ, “ಯಾರೋ ರಫೀಕ್ ಎಂಬಾತ ವಕೀಲರ ವಿರುದ್ಧ ದೂರು ನೀಡಿದ್ದಾನೆ. ಯಾರೋ ಪ್ರಗತಿಪರರು ವಕೀಲರ ಸಂಘಕ್ಕೆ ಹೋಗಿ ಗಲಾಟೆ ನಡೆದಿದೆ. ರಾಮನಗರದಲ್ಲಿ ಸ್ಥಳೀಯ ಶಾಸಕ, ಜಿಲ್ಲಾ ಮಂತ್ರಿ ಆಡಳಿತ ನಡೆಸುತ್ತಿದ್ದಾರಾ? ಅಥವಾ ಪ್ರಗತಿಪರರು ಆಡಳಿತ ಮಾಡ್ತಿದ್ದಾರಾ? ನ್ಯಾಯಾಲಯದ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿದ್ದದ್ದು ಒಬ್ಬ ಮುಸ್ಲಿಂ, ದೂರು ಕೊಟ್ಟಿದ್ದು ಮುಸ್ಲಿಂ, ಸ್ಥಳೀಯ ಶಾಸಕ ಮುಸ್ಲಿಂ, ಇಲ್ಲಿನ ಪಿಎಸ್‌ಐ ಸಹ ಮುಸ್ಲಿಂ- ಹೀಗಾಗಿ, ಅಲ್ಲಿ ಏನು ನಡೆಯುತ್ತಿದೆ ಅಂತ ಗೊತ್ತಾಗ್ತಿದೆ” ಎಂದು ವಿವಾದಕ್ಕೆ ಕೋಮು ಬಣ್ಣ ಬಳಿದಿದ್ದಾರೆ. ಅಲ್ಲದೆ, ಪಿಎಸ್ಐ ಮತ್ತು ಎಸ್‌ಪಿಯನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಘಟನೆಯ ಹಿನ್ನೆಲೆ
ಗ್ಯಾನವ್ಯಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಣಾಸಿ ಜಿಲ್ಲಾ ನ್ಯಾಯಾಲಯ ನೀಡಿದ್ದ ತೀರ್ಪು ಕುರಿತು ರಾಮನಗರದ ವಕೀಲ ಚಾನ್ ಪಾಷಾ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದು ಹಿಂದು ಧರ್ಮೀಯರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದ ಮೇಲೆ ವಕೀಲರ ಸಂಘದಿಂದ ಚಾನ್ ಪಾಷಾ ಅವರನ್ನು ಸಂಘದ ಜಿಲ್ಲಾಧ್ಯಕ್ಷ ಬಿ.ಎಂ ಶ್ರೀವತ್ಸ ಅವರು ಸಂಘದಿಂದ ವಜಾಗೊಳಿಸಿದ್ದಾರೆ. ಅಲ್ಲದೆ, ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.
ಚಾನ್ ಪಾಷಾ ಅವರನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ ದಲಿತ ಮುಖಂಡರು ವಕೀಲರ ಕಚೇರಿಗೆ ತೆರಳಿ, ಚಾನ್ ಪಾಷಾ ವಿರುದ್ಧದ ಆರೋಪ ಸುಳ್ಳಿನಿಂದ ಕೂಡಿದೆ. ಅವರನ್ನು ವಜಾಗೊಳಿಸಿರುವುದನ್ನು ಮತ್ತೊಮ್ಮೆ ಪುನರ್ ಪರಿಶೀಲಿಸಿ ಎಂದು ಕೇಳಿದ್ದಾರೆ. ಈ ವೇಳೆ, 11 ಮಂದಿ ವಕೀಲರು ದಲಿತ ಮುಖಂಡರಿಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಜಾತಿ ನಿಂದನೆ ಕುರಿತು ದಲಿತ ಮುಖಂಡರು ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದಾಗ ಪೊಲೀಸರು ಕೇಸ್ ದಾಖಲಿಸಿಕೊಳ್ಳುವುದಿಲ್ಲವೆಂದು ಹೇಳಿದ್ದರು. ಅಲ್ಲದೇ ಯಾವುದೇ ತಪ್ಪು ಮಾಡದ ದಲಿತ ಮುಖಂಡರಿಗೆ ಪೊಲೀಸ್ ಠಾಣೆಯಿಂದ ನೋಟಿಸ್ ಬಂದಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.