ಜನದನಿ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಹಾಗೂ ಹೋರಾಟಗಾರ ದಿ.ಮೋಹನ್ ಕುಮಾರ್ ಮಗ ಆಕಾಶ್ ಗೌತಮ್ ಮೇಲೆ ಇತ್ತೀಚೆಗೆ ನಡೆದ ಮಾರಣಾಂತಿಕ ಹಲ್ಲೆ ರಾಮನಗರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
2024 ಸೆಪ್ಟೆಂಬರ್ 11ರಂದು ಸಂಜೆ 5.30ರ ವೇಳೆ ಈ ಹಲ್ಲೆ ಸಂಭವಿಸಿದ್ದು, ರಾಮನಗರದ ಉಮೇಶ್ ಬಾರ್‌ನಲ್ಲಿ ಆಕಾಶ್ ಗೌತಮ್‌ರನ್ನು ಉದ್ದೇಶ ಪೂರ್ವಕವಾಗಿ ಕಿಡಿಗೇಡಿಗಳು ಹಲ್ಲೆಗೈದಿದ್ದಾರೆ.
ದುಷ್ಕರ್ಮಿಗಳ ಗುಂಪು ಆಕಾಶ್ ಮೇಲೆ ಬಿಯರ್ ಬಾಟಲ್‌ನಿಂದ ತಲೆಗೆ ಹೊಡೆದು, ತೀವ್ರ ಗಾಯಗೊಳಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಎದೆ ಹಾಗೂ ಪಕ್ಕೆಲುಬುಗಳಿಗೆ ಹಲ್ಲೆ ನಡೆಸಿದ್ದಾರೆ. ಟೇಬಲ್‌ನಿಂದ ನೆಲಕ್ಕೆ ಬಿದ್ದಿದ್ದ ಆಕಾಶ್ ಬಲಗೈನ ತೋಳಿನ ಮೂಳೆ ಮುರಿದಿದೆ. ಅಲ್ಲದೇ, ಬಿಯರ್ ಬಾಟಲ್‌ನಿಂದ ಹಲ್ಲೆ ನಡೆಸಿದ ಪರಿಣಾಮ ಮುಖ ಮತ್ತು ಮೂಗಿಗೆ ತೀವ್ರ ರಕ್ತಗಾಯವಾಗಿದೆ. ಬಾರ್‌ನ ಸಿಸಿಟಿವಿಯಲ್ಲಿ ಹಲ್ಲೆ ನಡೆಸಿರುವ ದೃಶ್ಯ ದಾಖಲಾಗಿದೆ.
ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಹಲ್ಲೆಗೆ ಸಂಬಂಧಿಸಿದಂತೆ ಐಪಿಸಿ 307 (ಕೊಲೆ ಯತ್ನ) ಸೆಕ್ಷನನ್ನು ಸೇರಿಸಿಲ್ಲವೆಂದು ಆಕಾಶ್ ಗೌತಮ್ ಕುಟುಂಬ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು, ಕುಟುಂಬದವರು ಮೇಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.
ಘಟನೆಯಲ್ಲಿ ಭಾಗಿಯಾದ ಆರೋಪಿಗಳ ಪೈಕಿ ಪ್ರಮುಖನಾದ ಪುನೀತ್ ಅಲಿಯಾಸ್ ಮೀಸೆ ಪುನಿ, ಗುಡ್ಡೆ ವೆಂಕಟೇಶ್ ಮಗನಾಗಿದ್ದು, ಬಾಲಗೆರೆ ಪ್ರತಾಪ್ ಅಲಿಯಾಸ್ ಸೋನು ಹಾಗೂ ಇನ್ನು ಇಬ್ಬರು ಸಹಚರರೊಂದಿಗೆ ಸೇರಿ ಈ ಹಲ್ಲೆಯನ್ನು ನಡೆಸಿದ್ದಾರೆ.

ಹಲ್ಲೆಗೈದ ಪುನೀತ್ ಅಲಿಯಾಸ್ ಮೀಸೆ ಪುನಿ ರಾಜಕೀಯ ಬೆಂಬಲದ ಕಾರಣದಿಂದ, ಸಾರ್ವಜನಿಕವಾಗಿ ಬೀಗುತ್ತಿದ್ದಾನೆ ಎಂಬ ಆರೋಪ ಕೂಡ ಕೇಳಿಬಂದಿದೆ.
ಇದನ್ನು ಓದಿದ್ದೀರಾ? ರಾಯಚೂರು | ಸಂಜಯ್ ಕುರ್ಡೀಕರ್ ಕೊಲೆ ಪ್ರಕರಣ: ತನಿಖೆಯನ್ನು ಖುದ್ದು ಪರಿಶೀಲಿಸಲು ಎಸ್‌ಪಿಗೆ ಸೂಚಿಸಿದ ಸಿಎಂ
ಈ ಸಂಬಂಧ ಆಕಾಶ್ ಗೌತಮ್ ಸಹೋದರ ಅಕ್ಷಯ್ ಗೌತಮ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ನಮಗೆ ಜೀವ ಬೆದರಿಕೆ ಇದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಕೂಡಲೇ ಬಂಧಿಸಿ, ನಮಗೆ ನ್ಯಾಯ ಒದಗಿಸಿಕೊಡಬೇಕು” ಎಂದು ಆಗ್ರಹಿಸಿದ್ದಾರೆ.
“ನನ್ನ ಮಗನ ಮೇಲೆ ಮಾರಣಾಂತಿಕ ಹಲ್ಲೆಗೈದವರನ್ನು ಐಜೂರು ಪೊಲೀಸರು ಇನ್ನೂ ಬಂಧಿಸಿಲ್ಲ. ನಮಗೆ ನ್ಯಾಯ ಬೇಕು ಎಂದು ಹಲ್ಲೆಗೊಳಗಾದ ಆಕಾಶ್ ಗೌತಮ್ ತಾಯಿ ನಾಗರತ್ನ ತಿಳಿಸಿದ್ದಾರೆ.
