ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಸಬಾ ಹೋಬಳಿಯ ರಾಯಸಂದ್ರ ಗ್ರಾಮದಲ್ಲಿ ಭೂಪರಿವರ್ತನೆ ನಿಯಮ ಉಲ್ಲಂಘಿಸಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿದೆ.
ರಾಯಸಂದ್ರ ಗ್ರಾಮದ ಸರ್ವೇ ನಂಬರ್ 47 ರಲ್ಲಿ ಆ ಖರಾಬು 12 ಗುಂಟೆ ಸೇರಿ 36 ಗುಂಟೆ ಮತ್ತು ಸರ್ವೇ ನಂಬರ್ 431 ರಲ್ಲಿ 30 ಗುಂಟೆ ಸೇರಿ ಒಟ್ಟು 1.26 ಗುಂಟೆ ಜಮೀನನ್ನು ಕೈಗಾರಿಕೆ ಅಂದರೆ ಮಣ್ಣಿನ ಇಟ್ಟಿಗೆ ಕಾರ್ಖಾನೆಗೆ ಭೂಪರಿವರ್ತನೆ ಮಾಡಿಸಿದ್ದು, ಸದ್ಯ ಆ ಜಾಗದಲ್ಲಿ ಮಣ್ಣಿನ ಇಟ್ಟಿಗೆ ಕಾರ್ಖಾನೆ ಬದಲಿಗೆ ಬೃಹತ್ ಐದು ಅಂತಸ್ಥಿನ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇದು ಭೂಪರಿವರ್ತನ ಕಾರ್ಯ ನಿಯಮ ಉಲ್ಲಂಘನೆ ಆಗಿರುವುದಾಗಿ ಸ್ವಾಮಿ ಹೆಚ್ ಆರ್ ಎಂಬವರು ತಿಳಿಸಿದ್ದಾರೆ.
ತುಂಗಣಿ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದ್ದ ಉದ್ದೇಶವನ್ನು ಬಿಟ್ಟು ಬೇರೆ ಉದ್ದೇಶಕ್ಕೆ ಅನುಮತಿ ನೀಡಿರುವುದು ಕೂಡಾ ಕರ್ತವ್ಯ ಲೋಪ ಹಾಗೂ ನಿಯಮ ಬಾಹಿರವಾಗಿದೆ. ಸ್ವಾಮಿ ಹೆಚ್ ಆರ್ ಅವರು ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ. ತಿಂಗಳುಗಳೇ ಕಳೆದರು ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳದೇ ಅನೈತಿಕವಾಗಿ ಅಕ್ರಮ ಕಟ್ಟಡಕ್ಕೆ ಕಾನೂನು ಬಾಹಿರವಾಗಿ ಬೆಂಬಲ ನೀಡುತ್ತಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ.
ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ದಾಖಲೆಗಳ ಪ್ರಕಾರ ಕಟ್ಟಡ ಕಟ್ಟಿರುವಂತಹ ಸರ್ವೇ ನಂಬರ್ ಜಾಗ ಹಸಿರು ವಲಯಕ್ಕೆ ಸೇರಿದ್ದಾಗಿರುತ್ತದೆ. ಕಟ್ಟಡವನ್ನು ನಿರ್ಮಿಸಲು ರಾಯಸಂದ್ರ ಗ್ರಾಮದ ಖಾತೆ ನಂ: 353/34, 354/35, 355/36 ರಲ್ಲಿ ಕಟ್ಟಡ ನಿರ್ಮಿಸಲು ಗ್ರಾಮ ಪಂಚಾಯಿತಿ ಕೊಟ್ಟಿರುವ ಪರವಾನಿಗೆ ಪಂಚಾಯತ್ ರಾಜ್‌ನ ಅಧಿನಿಯಮಕ್ಕೆ ವಿರುದ್ಧವಾಗಿರುತ್ತದೆ ಎಂದು ತಿಳಿದುಬಂದಿದೆ.

ಜಮೀನು ಮಾಲೀಕರು ಆರ್‌ಸಿಸಿ ಮನೆ ನಿರ್ಮಿಸಲು ಅನುಮತಿ ಪಡೆದು ಬೃಹತ್ ಗಾತ್ರದ ಕಟ್ಟಡ ನಿರ್ಮಿಸಿರುತ್ತಾರೆ. 2005 ನೇ ಸಾಲಿನಲ್ಲಿ ಪಿಡಿಓ ಈ ಸರ್ವೇ ನಂಬರ್ ಜಾಗದಲ್ಲಿ ಇಟ್ಟಿಗೆ ಕಾರ್ಖಾನೆಗೆ ಅನುಮತಿ ನೀಡಿದ್ದರು. ಆದರೆ ಅಲ್ಲಿ ಯಾವುದೇ ರೀತಿಯಾದಂತಹ ಕೈಗಾರಿಕೆಯನ್ನು ನಿರ್ಮಿಸಿರುವುದಿಲ್ಲ. ತದನಂತರ ಲೇಔಟ್‌ಗೂ ಅನುಮತಿಯನ್ನು ಕೂಡಾ ನೀಡಿರುತ್ತಾರೆ. ಇದು ಕೂಡಾ ಅಧಿಕಾರಿಗಳ ಕರ್ತವ್ಯ ಲೋಪವಾಗಿರುತ್ತದೆ.
ತುಂಗಣಿ ಗ್ರಾಮ ಪಂಚಾಯಿತಿ ಪಿಡಿಒ ಅವರು, ಮನೆ ಕಟ್ಟಡ ಲೈಸನ್ಸ್ ಪಡೆಯಲು ಜಾಗದ ಮಾಲೀಕರು ಸಲ್ಲಿಸಿರುವಂತಹ ಯಾವುದೇ ದಾಖಲಾತಿಗಳನ್ನು ಮಾಹಿತಿ ಹಕ್ಕಿನ ಅಡಿ ಕೊಡುತ್ತಿಲ್ಲ. ಇದು ಅಧಿಕಾರಿಯ ಕರ್ತವ್ಯ ಲೋಪದ ಜೊತೆಗೆ ಅಕ್ರಮ ಕಟ್ಟಡಕ್ಕೆ ಸಹಕಾರ ನೀಡುವಂತೆ ಇದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಅಲ್ಲದೇ, ಈ ಸಂಬಂಧ ಕನಕಪುರ ತಾಲೂಕು ಕಾರ್ಯ ನಿರ್ವಹಣಾ ಅಧಿಕಾರಿಗೆ ದೂರುದಾರ ಸ್ವಾಮಿ ಅವರು, ದಾಖಲೆಗಳ ಜೊತೆಗೆ ದೂರು ಸಲ್ಲಿಸಿದ್ದಾರೆ. ಆದರೂ, ಇಒ ಕೂಡ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಅವರ ಈ ನಡೆ ಅಕ್ರಮ ಕಟ್ಟಡಕ್ಕೆ ಬೆಂಬಲ ನೀಡುವಂತಹ ಅನುಮಾನ ಮೂಡಿಸುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.
ರಾಮನಗರ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಒ, ತುಂಗಣಿ ಗ್ರಾಮ ಪಂಚಾಯಿತಿಯಲ್ಲಿ ಇರುವಂತಹ ದಾಖಲೆಗಳನ್ನು ಪರಿಶೀಲಿಸಿ ನೋಡಬೇಕು. ಎಲ್ಲವೂ ಕಾನೂನುಬದ್ಧವಾಗಿದ್ದರೆ ಕಟ್ಟಡಕ್ಕೆ ಅನುಮತಿ ನೀಡಿ, ಇಲ್ಲವಾದಲ್ಲಿ ಕಟ್ಟಡವನ್ನು ಈ ಕೂಡಲೇ ತೆರವುಗೊಳಿಸುವಂತೆ ನೋಟಿಸ್ ನೀಡಬೇಕು. ಅಕ್ರಮ ಕಟ್ಟಡಕ್ಕೆ ಬೆಂಬಲಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಹಾಗೂ ಅಕ್ರಮ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು ಎಂಬುದು ದೂರುದಾರರ ಒತ್ತಾಯವಾಗಿದೆ.
