ಶಿವರಾತ್ರಿ ಎಂದರೆ ಉಪವಾಸ, ಜಾಗರಣೆ, ಲಘು ಉಪಹಾರ, ಸಿಹಿ ಖಾದ್ಯ ಸೇವನೆಗಳು ನೆನಪಾಗುತ್ತವೆ. ಆದರೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಮಂಗಾಡಹಳ್ಳಿಯಲ್ಲಿ ವಿಶೇಷ ಆಚರಣೆಯೊಂದು ರೂಢಿಯಲ್ಲಿದೆ.
ಇಲ್ಲಿನ ಚನ್ನಪ್ಪಾಜಿಸ್ವಾಮಿ ಮಠದ ಮಂಠೇಸ್ವಾಮಿಗೆ ಶಿವರಾತ್ರಿ ದಿನ ವಿಧ ವಿಧದ ಬಾಡೂಟ ಸಿದ್ಧಪಡಿಸಿ ನೈವೇದ್ಯ ಮಾಡುವುದರ ಜೊತೆಗೆ ಭಕ್ತರೆಲ್ಲರೂ ಪ್ರಸಾದ ರೂಪದಲ್ಲಿ ಬಾಡೂಟ ಸವಿಯುತ್ತಾರೆ ಎನ್ನುವ ವಿಚಾರ ಬಹುತೇಕರಿಗೆ ಗೊತ್ತಿಲ್ಲ.
ನಿನ್ನೆ ಶಿವರಾತ್ರಿ ಹಬ್ಬದ ಪ್ರಯುಕ್ತ ಗ್ರಾಮಕ್ಕೆ ಸುಮಾರು 5 ರಿಂದ 6 ಸಾವಿರ ಶಿವ ಭಕ್ತರು ಸೇರಿ ಬಾಡೂಟ ಸಿದ್ದಪಡಿಸಿ ಶಿವರಾತ್ರಿ ಆಚರಿಸಿದ್ದಾರೆ. ʼಶಿವ ಸ್ಮಶಾನ ವಾಸಿ, ಭೂತಪ್ರೇತ ಗಣಗಳ ಅಧಿನಾಯಕ. ಆದ್ದರಿಂದ ಆತ ಮಾಂಸ ಸೇವಿಸುತ್ತಾನೆ. ಅದಕ್ಕಾಗಿಯೇ ಅವನಿಗಾಗಿ ಮಾಂಸದ ಭಕ್ಷ್ಯಗಳನ್ನು ಮಾಡಿ ನಮ್ಮಪ್ಪನಿಗೆ ಅರ್ಪಿಸುತ್ತೇವೆʼ ಎಂಬುದು ಅಲ್ಲಿನ ಶಿವ ಭಕ್ತರ ಮಾತು.
ಇದನ್ನೂ ಓದಿ: ರಾಮನಗರ | ತಾತನ ಪುಣ್ಯ ಕಾರ್ಯ; ನದಿಯಲ್ಲಿ ಮುಳುಗಿ ಮೊಮ್ಮಗಳು, ಸಂಬಂಧಿ ಮಹಿಳೆ ಸಾವು
ಚನ್ನಪ್ಪಾಜಿ ದೇವಾಲಯಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದ್ದು, ಆಗಿನಿಂದಲೂ ಒಮ್ಮೆಯೂ ಈ ಆಚರಣೆ ನಿಂತಿರುವ ಉದಾಹರಣೆ ಇಲ್ಲ. ಒಂದೊಮ್ಮೆ ನಿಲ್ಲಿಸಿದರೆ, ಏನಾದರೂ ಕೆಡುಕಾಗಬಹುದು ಎನ್ನುವುದು ಗ್ರಾಮಸ್ಥರ ನಂಬಿಕೆ. ಮೊದಮೊದಲು ಚಿಕ್ಕದಾಗಿ ನಡೆಯುತ್ತಿದ್ದ ಈ ಆಚರಣೆ ಈಗ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಸುತ್ತಲಿನ ಮಂಗಾಡುಹಳ್ಳಿ, ವಿರುಪಾಕ್ಷಿಪುರ, ಬಲ್ಲಾಪಟ್ಟಣ, ಕೋಡಂಬಹಳ್ಳಿ, ಸೋಗಾಲ, ಅಕ್ಕೂರು, ಸಾದಾರಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರು ಒಟ್ಟಿಗೆ ಸೇರಿ ಕುರಿ, ಕೋಳಿಗಳನ್ನು ಬಲಿಕೊಟ್ಟು ಸಾಮೂಹಿಕ ಹರಕೆ ತೀರಿಸುತ್ತಾರೆ.
