ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಐದು ತಿಂಗಳಲ್ಲಿ 570ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಎಕ್ಸ್‌ಪ್ರೆಸ್‌ವೇನಲ್ಲಿ ಪರಿಶೀಲನೆ ನಡೆಸಿದ್ದು, “ಹೆದ್ದಾರಿಯಲ್ಲಿ ಪೊಲೀಸರು ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಬೇಕು. ಆಗ ಅಪಘಾತ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಬಹುದು” ಎಂದು ಹೇಳಿದ್ದಾರೆ.
ಬೆಂಗಳೂರಿನ ಹೊರವಲಯದ ಬಾಬಾಸೇಹಬರ ಪಾಳ್ಯದಿಂದ ರಾಮನಗರವರೆಗೆ ಪರಿಶೀಲನೆ ನಡೆಸಿ, ರಾಮನಗರದಲ್ಲಿ ಪೊಲೀಸರೊಂದಿಗೆ ಅಲೋಕ್ ಕುಮಾರ್ ಸಭೆ ನಡೆಸಿದ್ದಾರೆ. “ಹೆದ್ದಾರಿಗಳಲ್ಲಿ ಪೊಲೀಸರು ಸಮವಸ್ತ್ರದಲ್ಲಿ ಕಾಣ ಸಿಗುತ್ತಿಲ್ಲ. ಪೊಲೀಸರು ಸಮವಸ್ತ್ರದಲ್ಲಿ ಕಾಣಿಸಿಕೊಂಡರೆ, ವಾಹನ ಸವಾರರಿಗೆ ಭಯ ಇರುತ್ತದೆ. ನಿಧಾನ ಮತ್ತು ಸುಗಮವಾಗಿ ಚಲಿಸುತ್ತಾರೆ” ಎಂದು ಅವರು ಹೇಳಿದ್ದಾರೆ.
“ಬೆಂಗಳೂರಿನಿಂದ ಬೆಳಗಾವಿವರೆಗೆ ಹೋದರೂ ಯಾವೊಬ್ಬ ಸಿಬ್ಬಂದಿಯೂ ಸಮವಸ್ತ್ರದಲ್ಲಿ ಕಾಣುವುದಿಲ್ಲ.ದಾವಣಗೆರೆಯಲ್ಲಿ ನಾನು ಎಸ್‌ಪಿ ಆಗಿದ್ದಾಗ ಹೆದ್ದಾರಿಯಲ್ಲಿ ಪಹರೆ ಮಾಡುತ್ತಿದ್ದೆವು. ಅದರಿಂದ, ಆ ಹೆದ್ದಾರಿಯಲ್ಲಿ ಶೇ.40ರಷ್ಟು ಅಪಘಾತ ಕಡಿಮೆಯಾಗಿದ್ದವು” ಎಂದು ವಿವರಿಸಿದ್ದಾರೆ.