ಉತ್ತರಪ್ರದೇಶದ ಅಯೋಧ್ಯೆಯಲ್ಲಿ ದಲಿತ ಯುವತಿಯ ಅತ್ಯಾಚಾರ, ಕೊಲೆ ಕೃತ್ಯ ಖಂಡಿಸಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಹುಮನಾಬಾದ್ ಪಟ್ಟಣದ ಪ್ರವಾಸಿ ಮಂದಿರದಿಂದ ಡಾ.ಅಂಬೇಡ್ಕರ್ ಅವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದರು. ರಾಷ್ಟ್ರಪತಿಗಳ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಾಲ್ಲೂಕು ಆಡಳಿತಕ್ಕೆ ಸಲ್ಲಿಸಿದರು.
ʼಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ 22 ವರ್ಷದ ದಲಿತ ಯುವತಿಯ ಅತ್ಯಾಚಾರ, ಕೊಲೆ ಘಟನೆ ಇಡೀ ಮಾನವ ಸಮಾಜ ತಲೆತಗ್ಗಿಸುವ ಹೇಯ ಕೃತ್ಯ, ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಉತ್ತರಪ್ರದೇಶದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದರೂ ಸ್ಥಳೀಯ ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆ ಕ್ರಮಕ್ಕೆ ಮುಂದಾಗುತ್ತಿಲ್ಲʼ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜನವರಿ 30ರಂದು ಯುವತಿ ನಾಪತ್ತೆಯಾಗಿದ್ದಳು. ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಪತ್ತೆ ಹಚ್ಚುವಲ್ಲಿ ವಿಳಂಬವಾಗಿ, ಫೆಬ್ರುವರಿ 1ನೇ ತಾರೀಖು ಕಾಲುವೆಯಲ್ಲಿ ಮೃತದೇಹ ಸಿಕ್ಕಿತ್ತು. ʼನಾಪತ್ತೆಯಾಗಿದ್ದ ನಮ್ಮ ಮಗಳನ್ನು ಕೊಲೆ ಮಾಡಲಾಗಿದೆ, ಆಕೆಯ ಕಣ್ಣುಗಳನ್ನು ಕಿತ್ತು ಹಾಕಲಾಗಿದೆ, ಮೃತದೇಹದ ಮೇಲೆ ಭೀಕರ ಗಾಯಗಳು ಕಂಡು ಬಂದಿದೆʼ ಎಂದು ಯುವತಿ ಕುಟುಂಬ ಹೇಳಿದೆ. ಆದರೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರೂ ಅಯೋಧ್ಯೆಯ ಬಂದೋಬಸ್ತ್‌ನಲ್ಲಿದ್ದೇವೆ ಎಂದು ಹೇಳಿ ಯುವತಿಯ ಕೊಲೆಗೆ ಕಾರಣರಾಗಿದ್ದಾರೆʼ ಎಂದು ಕಿಡಿಕಾರಿದರು.

ದಲಿತ ಅತ್ಯಾಚಾರ ಘಟನೆಗಳು ತಡೆಯಬೇಕಾದರೆ ತ್ವರಿತ ತನಿಖೆ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆ ವಿಧಿಸುವುದು ಅಗತ್ಯವಿದೆ. ಈ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಅಲ್ಲಿನ ಸರ್ಕಾರ ಎಚ್ಚರವಹಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ನರೇಗಾ ಪರಿಣಾಮಕಾರಿ ಅನುಷ್ಠಾನ : ತೋರಣಾ ಗ್ರಾಮ ಪಂಚಾಯಿತಿಗೆ ಪುರಸ್ಕಾರ
ಭಾರತೀಯ ದಲಿತ ಪ್ಯಾಂಥರ್ ತಾಲ್ಲೂಕಾಧ್ಯಕ್ಷ ಗಣಪತಿ ಅಷ್ಟೂರೆ, ಉಪಾಧ್ಯಕ್ಷ ಸಿದ್ದಾರ್ಥ್ ಜಾನವೀರ್ ಸೇರಿದಂತೆ ಪ್ರಮುಖರಾದ ಸುಶೀಲಕುಮಾರ್ ಭೋಲಾ, ಶಿವಕುಮಾರ್ ಮಾಡಗೂಳ್, ಯುವರಾಜ್ ಐಹೊಳಿ, ಶಶಿಕಾಂತ್ ಡಾಂಗೆ, ದೇವೇಂದ್ರ ಗದ್ದಾರ್, ಆಕಾಶ ಮೇಟಿ, ಪ್ರಭಾವತಿ, ಕಾವೇರಿ ಕಾಂಬಳೆ, ಮೀನಾಕ್ಷಿ, ಆನಂತ್ ಮಾಳಗೆ, ದಶರಥ ದಾಂಡೇಕರ್, ಶಿವಕುಮಾರ್ ಸಾಗರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.