ಜಾತಿ, ಧರ್ಮ, ಮತವೆಂದು ಬೀದಿ ಬೀದಿಯಲ್ಲಿ ಹೆಣ ಉರುಳುವ ಈ ಕಾಲದಲ್ಲೂ ಯಾವುದೇ ಸ್ವಾರ್ಥ ಇಲ್ಲದೆ ವೇಷ ತೊಟ್ಟು ಬಡವರ ಮಕ್ಕಳ ಗಂಭೀರ ಕಾಯಿಲೆಯ ಚಿಕಿತ್ಸೆಯ ನೆರವಿಗೆ ನಿಂತು ಅವರ ಜೀವ ಉಳಿಸಿ ಮನುಕುಲದ ಮಾನವೀಯತೆಗೆ ಸಾಕ್ಷಿ ಎಂಬಂತೆ ನಮ್ಮ ನಡುವೆ ಅಪರೂಪದಲ್ಲೊಬ್ಬ ಅಪರೂಪ ವ್ಯಕ್ತಿಯೇ ರವಿ ಕಟಪಾಡಿ.
ಉಡುಪಿ ಜಿಲ್ಲೆಯ ಕಟಪಾಡಿಯ ರವಿ ಕೂಲಿ ಕೆಲಸ ಮಾಡಿಕೊಂಡು ತನಗೆ ಸರಿಯಾದ ಸೂರಿಲ್ಲದೆ ಇತರರ ಸೇವೆಗೆ ಕಳೆದ ಹಲವಾರು ವರ್ಷಗಳಿಂದ ಕಾರ್ಯಪ್ರವೃತ್ತರಾಗಿದ್ದಾರೆ.

ಬಡವರ, ಅನಾರೋಗ್ಯ ಪೀಡಿತ, ಯಾವುದೇ ಜಾತಿ ಧರ್ಮ ನೋಡದೆ ಪ್ರತಿ ವರ್ಷ ಅಷ್ಠಮಿಯ ದಿನ ವಿಶಿಷ್ಟ ವೇಷವನ್ನು ಧರಿಸಿ ಜನರ ಬಳಿ ತೆರಳಿ ಇವರ ತಂಡ ಸಹಾಯವನ್ನು ಯಾಚಿಸುತ್ತದೆ. ಹೀಗೆ ಯಾಚಿಸಿ ಸಾರ್ವಜನಿಕರರಿಂದ ಸಂಗ್ರಹಿಸಿದ್ದು ಒಂದು ಕೋಟಿ ಹದಿಮೂರು ಲಕ್ಷ. ಇಷ್ಟು ಹಣದಿಂದ ಈಗಾಗಲೇ ಅನಾರೋಗ್ಯ ಪೀಡಿತ ಮಕ್ಕಳಿಗೆ ನೆರವನ್ನು ನೀಡಿದ್ದಾರೆ. ರವಿ ಕಟಪಾಡಿ ಈಗ ಊರಿಗೆ ಮಾತ್ರವಲ್ಲದೆ ನಾಡಿನಾದ್ಯಂತ ತನ್ನ ವಿಶಿಷ್ಟ ಮಾನವೀಯ ಸೇವೆಯಿಂದಾಗಿ ಚಿರಿಪರಿಚಿತರಾಗಿದ್ದಾರೆ. ಈಗಾಗಲೇ ನೂರಾರು ಸನ್ಮಾನಗಳೂ ಬಂದಿವೆ. ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗ ಕರೋಡ್ ಪತಿಯಲ್ಲಿಯೋ ವಿಶೇಷ ಆಹ್ವಾನಿತರಾಗಿ ಅದರಿಂದ ಗಳಿಸಿದ ಹಣವನ್ನೂ ಕೂಡ ಬಡ ನಿರ್ಗತಿಕರಿಗೆ ನೆರವು ನೀಡಿದ್ದಾರೆ.

ವಿಶಿಷ್ಟ ವೇಷ ಧರಿಸಿ ಜನರನ್ನು ರಂಜಿಸುತ್ತಿದ್ದ ಸಮಾಜ ಸೇವಕ ರವಿ ಕಟಪಾಡಿ ಅವರು ಈ ಬಾರಿ ವಿಶಿಷ್ಟ ವೇಷದೊಂದಿಗೆ ಜನರನ್ನು ರಂಜಿಸಲು ಸಜ್ಜಾಗಿದ್ದಾರೆ. ಸೀ ಫೋಕ್ ಎಂಬ ಆಂಗ್ಲ ಚಲನಚಿತ್ರದ ವೇಷವನ್ನು ಹಾಕಿ ತಿರುಗಾಟ ನಡೆಸಲಿದ್ದಾರೆ.

ಪ್ರತಿ ವರ್ಷ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ವೇಷ ಧರಿಸುತ್ತಿದ್ದ ರವಿ ಕಟಪಾಡಿ ಅವರು, ಈ ಬಾರಿಯೂ ಅದನ್ನು ಮುಂದುವರಿಸಿದ್ದಾರೆ. ಕುಂದಾಪುರದ 2 ವರ್ಷದ ಮಗುವಿನ ಚಿಕಿತ್ಸೆಗಾಗಿ ಹಣ ಸಂಗ್ರಹ ಮಾಡಲು ನಿರ್ಧಾರ ಮಾಡಿದ್ದಾರೆ. ಆದರೆ ಈ ಬಾರಿ ರವಿ ಕಟಪಾಡಿ ಫ್ರೆಂಡ್ಸ್ ತಂಡ ಜನರ ಬಳಿಗೆ ಹೋಗಿ ಬಾಕ್ಸ್‌ಗಳನ್ನು ಹಿಡಿದು ಹಣ ಸಂಗ್ರಹ ಮಾಡದಿರಲು ತೀರ್ಮಾನಿಸಿದೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಭಾರೀ ಮಳೆ; ಕೃಷಿ ಹೊಂಡ ಭರ್ತಿ
ಈ ದಿನ.ಕಾಮ್ ಜೊತೆ ಮಾತನಾಡಿದ ರವಿ ಕಟಪಾಡಿ, “ಪ್ರತಿ ವರ್ಷದಂತೆ ಈ ಬಾರಿಯೂ ವೇಷ ಹಾಕುತ್ತಿದ್ದೇನೆ. ವೇಷದವರನ್ನು ನೋಡಿ ಬಾಗಿಲು ಹಾಕುತ್ತಿದ್ದರು. ಆದರೆ ನಮ್ಮ ತಂಡವನ್ನು ನೋಡಿ ಬಾಗಿಲು ತೆಗೆದು ಅವರಾಗಿಯೇ ಬಂದು ಹಣವನ್ನು ನೀಡಿ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ. ಉದ್ಯಾವರ, ಉಡುಪಿ, ಮಲ್ಪೆ, ಪಡುಕೆರೆ ಮತ್ತು ಇತರ ಪ್ರದೇಶಗಳಲ್ಲಿ ತಮ್ಮ ಫ್ರೆಂಡ್ಸ್ ತಂಡ ತಿರುಗಾಟ ನಡೆಸಲಿದೆ. ಈ ಬಾರಿ ವೇಷ ಹಾಕಿದರೂ ಕೂಡಾ ಜನರ ಬಳಿಗೆ ತೆರಳಿ ಬಾಕ್ಸ್‌ನಲ್ಲಿ ಹಣ ಸಂಗ್ರಹ ಮಾಡುವುದಿಲ್ಲ. ಬದಲಾಗಿ ಯಾರಿಗಾದರೂ ನಮ್ಮ ಉದ್ದೇಶಕ್ಕೆ ಸಹಕಾರ ನೀಡಲು ಇಚ್ಚಿಸಿದ್ದಲ್ಲಿ ನಮ್ಮ ವಾಹನದ ಬಳಿಗೆ ಬಂದು ತಮ್ಮ ಧನಸಹಾಯವನ್ನು ನೀಡಬಹುದು” ಎಂದರು.