ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆಲುವಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿರುವುದು ದೃಢವಾಗಿದೆ.
ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮದ ಶಿವಲಿಂಗ ಚಂದಪ್ಪ ಕುಂಬಾರ (17) ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಹಲವು ವರ್ಷಗಳಿಂದ ಬೆಂಗಳೂರಿನ ಸಣ್ಣೂರಿನಲ್ಲಿ ಸಿಮೆಂಟ್ ಇಟ್ಟಿಗೆ ತಯಾರಿಸುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ತಿಮ್ಮಮ್ಮ ಚಂದಪ್ಪ ಕುಂಬಾರ ದಂಪತಿಗೆ ಓರ್ವ ಪುತ್ರಿ ಇಬ್ಬರು ಗಂಡು ಮಕ್ಕಳು. ಕೊನೆಯ ಪುತ್ರ ಶಿವಲಿಂಗ ಬೆಂಗಳೂರಿನ ಯಲಹಂಕ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಾವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದನು.
ಶಿವಲಿಂಗ ಬುಧವಾರ ಮಧ್ಯಾಹ್ನ ಐಪಿಎಲ್ ಫೈನಲ್ ಪಂದ್ಯದಲ್ಲಿ ಜಯಗಳಿಸಿದ ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿಜಯದ ಸಂಭ್ರಮ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದಾನೆ. ರಾತ್ರಿಯಾದರೂ ಮನೆಗೆ ಬಾರದ ಮಗನನ್ನು ತಾಯಿ ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಮೃತ ಶಿವಲಿಂಗನ ಜೇಬಿನಲ್ಲಿದ್ದ ಮೊಬೈಲ್ ನ ಕರೆ ಸ್ವೀಕರಿಸಿ ‘ನಿಮ್ಮ ಮಗನಿಗೆ ಆಕ್ಸಿಡೆಂಟ್ ಆಗಿದೆ. ಬೌರಿಂಗ್ ಆಸ್ಪತ್ರೆಗೆ ಬನ್ನಿ’ ಅಂತ ಪ್ರತಿಕ್ರಿಯಿಸಿದ್ದಾರೆ.
ಕೂಡಲೇ ಕುಟುಂಬದ ಸದಸ್ಯರು ಬೌರಿಂಗ್ ಆಸ್ಪತ್ರೆಗೆ ತೆರಳಿದಾಗ ಮೃತ ಶಿವಲಿಂಗನ ಶವ ನೋಡಿ ಪೊಲೀಸರಿಗೆ ಕೇಳಿದಾಗ ‘ನಿಮ್ಮ ಮಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಸಮಾರಂಭದಲ್ಲಿ ನಡೆದ ಕಾಲ್ತುಳಿತದಿಂದ ಮೃತಪಟ್ಟಿದ್ದಾನೆ. ನೀವು ಆಘಾತಗೊಳ್ಳುತ್ತೀರಿ ಎಂದು ನಾವು ಆಕ್ಸಿಡೆಂಟ್ ಆಗಿದೆ ಬನ್ನಿ ಅಂತ ಹೇಳಿದ್ದು’ ಎಂದು ತಿಳಿಸಿದ್ದರು.
ಇದನ್ನೂ ಓದಿ : ಸಮೂಹ ಸನ್ನಿಯ ಬಿತ್ತಿ ಹಣದ ಬೆಟ್ಟವನ್ನೇ ಬಾಚುತ್ತಿರುವ ಐಪಿಎಲ್; ಅಭಿಮಾನಿಗಳ ಕಣ್ಣಿಗೆ ಮಣ್ಣೆರಚುತ್ತಿದೆ!
ಆರ್‌ಸಿಬಿ ವಿಜಯೋತ್ಸವ ಸಂಭ್ರಮದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಒಟ್ಟು 11 ಜನ ಮೃತಪಟ್ಟಿದ್ದು, ಅದರಲ್ಲಿ ಯಾದಗಿರಿ ಮೂಲದ ವಲಸೆ ಕಾರ್ಮಿಕ ಕುಟುಂಬದ ಶಿವಲಿಂಗ ಕುಂಬಾರ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಮೃತ ಮಗನ ಶವ ಹೂಳಲು ಚಂದಪ್ಪನಿಗೆ ಸ್ವಂತ ಹೊಲ ಇಲ್ಲದಿರುವುದಕ್ಕೆ ಆಶನಾಳ ಗ್ರಾಮದ ಸೋದರ ಮಾವನ ಹೊಲದಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.