ಮಂತ್ರಿಗಳು ಪ್ರತಿಯೊಂದು ಪೋಸ್ಟಿಂಗ್ ಮತ್ತು ಪ್ರಮೋಷನ್‌ಗೂ ಅಧಿಕಾರಿಗಳಿಂದ ಹಣ ಪಡೆಯುತ್ತಿದ್ದಾರೆ. ಬಿಜೆಪಿ ಸರಕಾರದಲ್ಲಿ ನನ್ನ ಆಡಳಿತದಲ್ಲಿ ಒಬ್ಬ ಅಧಿಕಾರಿಯಿಂದ ಹಣ ಪಡೆದಿರುವುದು ಸಾಬೀತಾದರೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಂಸದ ಸುಧಾಕರ್ ಸವಾಲೆಸೆದರು.
ಚಿಕ್ಕಬಳ್ಳಾಪುರ ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಅಧಿಕಾರಿ ಜಿಲ್ಲೆಗೆ ಬರಬೇಕಾದರೆ ಹಣ ಕೊಡಬೇಕು. ಪ್ರತಿಯೊಂದು ಪೋಸ್ಟಿಂಗ್‌ಗೂ ದುಡ್ಡು ಕೊಡಬೇಕು, ಪ್ರಮೋಷನ್‌ಗೂ ದುಡ್ಡು ಕೊಡಬೇಕು. ಹಣ ಕೊಟ್ಟು ಬಂದ ಅಧಿಕಾರಿಗಳಿಂದ ಇವರು ಯಾವ ನೈತಿಕತೆ ಇಟ್ಟುಕೊಂಡು ಕೆಲಸ ಮಾಡಿಸಿಕೊಳ್ಳುತ್ತಾರೆ. ನಮ್ಮ ಸರಕಾರದ ವಿರುದ್ಧ ಮಾತನಾಡುವ ಇವರಿಗೆ ಮಾನ ಮರ್ಯಾದೆ ಇದೆಯಾ? ಎಂದು ಗುಡುಗಿದರು.
ಮಂತ್ರಿಗಳು ಪ್ರತೀ ಇಲಾಖೆಯಲ್ಲಿ ಏಜೆಂಟ್‌ಗಳನ್ನ ಇಟ್ಟಿದ್ದಾರೆ. ಈ ಜಿಲ್ಲೆಯಲ್ಲಿ ಅವರ ಸಂಬಂಧಿಕರು, ಅಣ್ಣತಮ್ಮಂದಿರು ಸೇರಿದಂತೆ ಅವರ ಮಕ್ಕಳೂ ಸಹ ಏಜೆಂಟ್‌ಗಳಾಗಿದ್ದಾರೆ. ಪ್ರತೀ ಕಡತಕ್ಕೂ ಇಂತಿಷ್ಟು ಹಣ ನಿಗದಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ವಿರುದ್ಧ ನೇರ ಆರೋಪ ಮಾಡಿದರು.
ಇಲಾಖೆಗಳಲ್ಲಿ ಯಾವುದೇ ನೋಂದಣಿಯಾಗಲೀ, ಜಮೀನು ಕನ್ವರ್ಷನ್ ಆಗಲೀ, ಅದಕ್ಕೆ ಇಂತಿಷ್ಟು ಹಣ ನಿಗದಿ ಮಾಡುತ್ತಿದ್ದಾರೆ. ಇದು ಜಗಜ್ಜಾಹೀರಾಗಿರುವ ವಿಚಾರ. ಈ ರೀತಿಯಾದರೆ ಅಧಿಕಾರಿಗಳು ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದರು.
ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗುತ್ತಿಗೆದಾರರು ಜಿಲ್ಲೆಯಲ್ಲಿ ಕಾಮಗಾರಿ ಮಾಡಲು ತಯಾರಿಲ್ಲ. ಅವರಿಂದ ದೊಡ್ಡ ಮೊತ್ತದ ಕಮಿಷನ್ ನಿರೀಕ್ಷೆ ಮಾಡುತ್ತಿದ್ದಾರೆ. ಹಾಗಾಗಿ ಗುತ್ತಿಗೆದಾರರು ಕಾಮಗಾರಿ ಕೈಗೆತ್ತಿಕೊಳ್ಳಲು ಹೆದರುತ್ತಿದ್ದಾರೆ. ಶಾಸಕರಿಗೆ ಕೊಡುವಷ್ಟು ಹಣ ಎಲ್ಲಿಂದ ತರಬೇಕು ಅವರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಎಸ್ಪಿಯವರ ಮಾತಿಗೆ ಕವಡೇ ಕಾಸಿನ ಕಿಮ್ಮತ್ತಿಲ್ಲವೇ?
ಸರ್ಕಲ್ ಇನ್ಸ್ಪೆಕ್ಟರ್ ಬರೋದಿಕ್ಕೆ 50 ಲಕ್ಷದಿಂದ 1 ಕೋಟಿ ಕೊಡಬೇಕು. ಅವರು ಎಲ್ಲಿಂದ ಹಣ ತರಬೇಕು. ಕಾವಲು ಕಾಯಬೇಕಾದವರೇ ಕಳ್ಳತನಕ್ಕೆ ಇಳಿದಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳೇ ಇದಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಇಂತಹವರನ್ನು ಜನ ಆಯ್ಕೆ ಮಾಡಿದ್ದಾರೆ. ಈಗ ಅನುಭವಿಸಲಿ. ನಮ್ಮ ಸರಕಾರ ಬಂದರೆ ಎಲ್ಲಾ ಸರಿಪಡಿಸುತ್ತೇವೆ ಎಂದು ಹೇಳಿದರು.