ಮಲೆನಾಡಿನಲ್ಲಿ ಮುಂಗಾರು ಚುರುಕಾಗಿದೆ. ನದಿ, ಹಳ್ಳ, ಕೆರೆಗಳು ತುಂಬಲಾರಂಭಿಸಿದೆ. ಈಗಾಗಲೇ ತುಂಗ ನದಿ ಜಲಾಶಯ ಭರ್ತಿಯಾಗಿದೆ. ಅದರಂತೆ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ತೀವ್ರಗೊಂಡಿದೆ.
ಕಳೆದ 24 ಗಂಟೆಯಲ್ಲಿ ಆಗುಂಬೆಯಲ್ಲಿ ಅತಿಹೆಚ್ಚಿನ ಮಳೆಯಾಗಿರುವುದು ದಾಖಲಾಗಿದೆ. ಆಗುಂಬೆಯಲ್ಲಿ 184.5 ಮಿಮಿ ಮಳೆಯಾದರೆ, ಶೃಂಗೇರಿಯಲ್ಲಿ 102.02 ಮಿಮಿ, ಹುಂಚದಕಟ್ಟೆ 67 ಮಿಮಿ, ತ್ಯಾಗರ್ತಿ 18.4 ಮಿಮಿ, ಭದ್ರಾವತಿಯಲ್ಲಿ 15.8 ಮಳೆಯಾಗಿದೆ. ಆಗುಂಬೆಯಲ್ಲೆ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಇದು ಬಿಟ್ಟರೆ ಕೊಡಗಿನ ಭಾಗಮಂಡಲದಲ್ಲಿ 168 .2 ಮಿಮಿ ಮಳೆಯಾಗಿದೆ.ಜಿಲ್ಲೆಯಲ್ಲಿ ಪ್ರಮುಖ ಜಲಾಶಯಗಳಾದ ತುಂಗ, ಭದ್ರ ಮತ್ತು ಲಿಂಗನಮಕ್ಕಿಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ತುಂಗ ಜಲಾಶಯ ಭರ್ತಿಯಾಗಿ ನದಿಗೆ ನೀರು ಹರಿಸಲಾಗಿದೆ. 588.24 ಅಡಿ ಜಲಾಶಯದ ಸಾಮರ್ಥ್ಯವಿದ್ದು 588.24 ಅಡಿ ನೀರು ಸಂಗ್ರಹವಾಗಿದೆ.

ಭದ್ರದಲ್ಲಿ 186 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 136 ಅಡಿ ನೀರು ಸಂಗ್ರಹವಾಗಿದೆ. ಲಿಂಗನಮಕ್ಕಿಗೆ 10,900 ಕ್ಯೂಸೆಕ್ ನೀರು ಹರಿದು ಬರುತ್ತಿದೆ.1819 ಅಡಿ ಸಾಮರ್ಥ್ಯ ಲಿಂಗನ ಮಕ್ಕಿಯಲ್ಲಿ ಇಂದು 1764 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಜೂನ್ ಅಂತ್ಯಕ್ಕೆ ಜಲಾಶಯದ ಸಾಮರ್ಥ್ಯ ಇಷ್ಟಿತ್ತೆಂದು ತಿಳಿದುಬಂದಿದೆ.
ಜಲಾನಯನ ಪ್ರದೇಶದಲ್ಲಿ ಹಗಲಿರುಳು ಸುರಿಯುತ್ತಿರುವ ಮಳೆಗೆ ತುಂಗ ನದಿಗೆ ಕಟ್ಟಲಾದ ಗಾಜನೂರು ಜಲಾಶಯ ಭರ್ತಿಯಾಗಿದೆ. ಈಗಾಗಲೇ ಯಾವಕ್ಷಣದಲ್ಲಾದರೂ ಜಲಾಶಯದ ನೀರು ನದಿಗೆ ಹರಿಸುವುದಾಗಿ ಪ್ರಕಟಣೆ ತಿಳಿಸಿದ್ದ ನೀರಾವರಿ ಇಲಾಖೆ, ಈಗ ಪವರ್ ಹೌಸ್ ಮೂಲಕ ನದಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
588.24 ಸಾಮರ್ಥ್ಯದ ಜಲಾಶಯ ಮುಂಗಾರು ಪೂರ್ವದಲ್ಲಿಯೇ ಭರ್ತಿಯಾಗಿದೆ. 3.71 ಟಿಎಂಸಿ ನೀರಿನ ಸಾಮರ್ಥ್ಯದ ಜಲಾಶಯಕ್ಜೆ 2000 ಕ್ಯೂ ಸೆಕ್ ನೀರು ಹರಿದು ಬರುತ್ತಿದ್ದು, ಮಧ್ಯಾಹ್ನದ ವೇಳೆಗೆ 800 ಕ್ಯೂಸೆಕ್ ನೀರನ್ನ ಪವರ್ ಹೌಸ್ ನಿಂದ ಹರಿಬಿಡಲಾಗುತ್ತದೆ. 800 ರಿಂದ 5000 ಕ್ಯೂಸೆಕ್ ವರೆಗೂ ಪವರ್ ಹೌಸ್ ಮೂಲಕವೇ ನದಿಗೆ ನೀರು ಹರಿಸಲಾಗುತ್ತದೆ.
ಒಂದು ವೇಳೆ ಒಳಹರಿವು ಹೆಚ್ಚಾದಲ್ಲಿ ಜಲಾಶಯದ ಮುಖ್ಯ ಗೇಟ್ ಗಳನ್ನ ತೆರೆದು ಜಲಾಶಯದಿಂದ ನದಿಗೆ ನೀರು ಹರಿಸಲಾಗುವುದು. ತುಂಗ ಜಲಾಶಯ ರಾಜ್ಯದಲ್ಲಿಯೇ ಅತಿ ಸಣ್ಣ ಜಲಾಶಯವಾಗಿದ್ದು ಮುಂಗಾರು ಪೂರ್ವ ಮಳೆಗೆ ಭರ್ತಿಯಾಗಿದೆ.