ಕರ್ನಾಟಕ ರೆಡ್ಡಿ ಜನಸಂಘದ ಶತಮಾನೋತ್ಸವ ಸಮಾರಂಭವನ್ನು ಸೆಪ್ಟೆಂಬರ್ 24ರಂದು ಬೆಂಗಳೂರಿನ ಗಾಯತ್ರಿ ವಿಹಾರದ ಅರಮನೆ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ ಎಂದು ಎರೆಹೊಸಹಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಬೆಳಗಾವಿ ನಗರದಲ್ಲಿ ತಿಳಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ರೆಡ್ಡಿ ಜನಸಂಘವು 100ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಸಂಭ್ರಮಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಮಾಜದ ಶಾಸಕರು, ಮಾಜಿ ಶಾಸಕರು, ಮುಖಂಡರು ಹಾಗೂ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸುಮಾರು 35 ಲಕ್ಷ ರೆಡ್ಡಿ ಸಮುದಾಯದವರು ಇದ್ದರೂ ಕಾಂತರಾಜು ವರದಿ ಕೇವಲ 7 ಲಕ್ಷ ಜನರಷ್ಟೇ ಇದ್ದಾರೆ ಎಂದು ತಪ್ಪು ಮಾಹಿತಿ ನೀಡಿದೆ. ಇದರ ಪರಿಣಾಮವಾಗಿ ನಾವು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜದ ಸದಸ್ಯರಿಗೆ ಕರೆ ನೀಡಿದ ಸ್ವಾಮೀಜಿ, ಸೆಪ್ಟೆಂಬರ್ 22ರಿಂದ ಆರಂಭವಾಗುವ ಸಮೀಕ್ಷೆಯಲ್ಲಿ ಯಾರೂ ಉಪಪಂಗಡಗಳ ಹೆಸರನ್ನು ಬರೆಯಿಸಬಾರದು. ಧರ್ಮದ ಕಾಲಂನಲ್ಲಿ ‘ಹಿಂದೂ’ ಹಾಗೂ ಜಾತಿ ಕಾಲಂನಲ್ಲಿ ‘ರೆಡ್ಡಿ’ ಎಂದೇ ಬರೆಯಿಸುವ ಮೂಲಕ ನಿಖರವಾದ ಜನಸಂಖ್ಯೆ ಹೊರಬರಬೇಕು ಎಂದು ತಿಳಿಸಿದ್ದಾರೆ.