ಒಕ್ಕೂಟವು ನಷ್ಟದಲ್ಲಿದೆ ಎಂಬ ಕಾರಣ ನೀಡಿ ಹಾಲು ಉತ್ಪಾದನೆ ಮಾಡುವ ರೈತರು ಮತ್ತು ಹೈನುಕಾರಿಕೆ ನಡೆಸುವವರಿಗೆ ನೀಡುವ ಹಾಲಿನ ದರದಲ್ಲಿ 1.5 ರೂ.ಗಳನ್ನು ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (RBKMUL) ಕಡಿತಗೊಳಿಸಿದೆ. ಈಗಾಗಲೇ, ಜಾನುವಾರುಗಳಿಗೆ ಮೇವು, ಇಂಡಿ-ಬೂಸಾಗಳಂತಹ ಪಶು ಆಹಾರ ದರ ಹೆಚ್ಚಾಗಿದ್ದು, ಅದಕ್ಕಾಗಿಯೇ ಸಾಕಷ್ಟು ಖರ್ಚು ಮಾಡುತ್ತಿರುವ ರೈತರನ್ನು ಬೆಲೆ ಕಡಿತವು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ರೈತರು ಮತ್ತು ಹೈನುಗಾರಿಕೆ ನಡೆಸುವವರಿಂದ ಪ್ರತಿ ಲೀಟರ್ ಹಾಲಿಗೆ 30.50 ರೂ.ಗಳನ್ನು ನೀಡಿ ಒಕ್ಕೂಟವು ಹಾಲು ಖರೀದಿ ಮಾಡುತ್ತಿತ್ತು. ಆದರೆ, ಈಗ 1.5 ರೂ. ಕಡಿಮೆ ಮಾಡಲಾಗಿದ್ದು, ರೈತರಿಗೆ ಪ್ರತಿ ಲೀಟರ್ ಹಾಲಿಗೆ 29 ರೂ. ನಿಗದಿ ಮಾಡಲಾಗಿದೆ. ಬೆಲೆ ಕಡಿತ ಮಾಡಿರುವ ಒಕ್ಕೂಟದ ವಿರುದ್ಧ ನಾಲ್ಕು ಜಿಲ್ಲೆಗಳ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರ ಕಡಿತ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟವು ನಾಲ್ಕೂ ಜಿಲ್ಲೆಗಳಿಂದ ನಿತ್ಯ 2.30 ಲಕ್ಷ ಲೀಟರ್ ಹಾಲು ಖರೀದಿ ಮಾಡುತ್ತಿದೆ. ಈ ಪೈಕಿ, ಹಾಲು, ಮೊಸರು, ಮಜ್ಜಿಗೆಯಂತೆ 1.60 ಲಕ್ಷ ಲೀಟರ್ ಮಾತ್ರ ಮಾರಾಟವಾಗುತ್ತಿದೆ. ಉಳಿದ 60 ರಿಂದ 70 ಸಾವಿರ ಲೀಟರ್ ಹಾಲನ್ನು ಹಾಲಿನ ಪುಡಿ ತಯಾರಿಕೆಗೆ ಬಳಸಲಾಗುತ್ತಿದೆ. ಆದರೆ, ಹಾಲಿನ ಪುಡಿಗೆ ವಿಶ್ವ ಮಾರುಕಟ್ಟೆಯಲ್ಲಿ 85 ರೂ. ಮಾತ್ರವೇ ಇದೆ. ಹೀಗಾಗಿ, ಒಕ್ಕೂಟ ನಷ್ಟದಲ್ಲಿದೆ. ನಷ್ಟವನ್ನು ಸರಿದೂಗಿಸಲು ದರ ಕಡಿತಗೊಳಿಸಬೇಕಾಗಿದೆ. ಇದು ಅನಿವಾರ್ಯ ಎಂದು ಒಕ್ಕೂಟ ಹೇಳಿದೆ.
ಪಶು ಆಹಾರದ ಬೆಲೆ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ಒಕ್ಕೂಟಗಳು ಗ್ರಾಹಕರಿಗೆ ನೀಡುವ ಹಾಲಿನ ದರವನ್ನೂ ಹೆಚ್ಚಿಸುತ್ತಲೇ ಇವೆ. ಆದರೂ, ರೈತರಿಂದ ಖರೀದಿಸುವ ಹಾಲಿನ ಬೆಲೆಯನ್ನು ಕಡಿತ ಮಾಡಿರುವುದು ರೈತ ವಿರೋಧಿ ನಡೆಯಾಗಿದೆ. ಒಕ್ಕೂಟವನ್ನು ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ರೈತರು ಆಗ್ರಹಿಸಿದ್ದಾರೆ.