ಬೆಂಗಳೂರು ಹಾಲು ಒಕ್ಕೂಟ (ಬಮುಲ್) ಬರೋಬ್ಬರಿ 67 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಹೇಳಿಕೊಂಡಿದ್ದು, ತನ್ನ ನಷ್ಟವನ್ನು ಸರಿದೂಗಿಸಲು ರೈತರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ. ರೈತರಿಂದ ಖರೀದಿಸುವ ಹಾಲಿನ ದರದಲ್ಲಿ 2 ರೂ. ಕಡಿತ ಮಾಡುವುದಾಗಿ ಹೇಳಿದೆ. ಬಮುಲ್ ನಿರ್ಧಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ಬಳಿಯ ಬೈರಾಪಟ್ಟಣದಲ್ಲಿರುವ ಬಮುಲ್ ಕಚೇರಿಯಲ್ಲಿ ರೈತರೊಂದಿಗೆ ಬಮೂಲ್ ವ್ಯವಸ್ಥಾಪಕ ಡಾ. ಶ್ರೀಧರ್ ಸಭೆ ನಡೆಸಿದ್ದಾರೆ. “ಬಮುಲ್ ನಷ್ಟದಲ್ಲಿದೆ. ಹಾಲು ಒಕ್ಕೂಟಕ್ಕೆ ಲಾಭ ದೊರೆತಾಗ, ರೈತರಿಂದ ಪಡೆಯುವ ಹಾಲಿನ ದರವನ್ನು ಹೆಚ್ಚಿಸಲಾಗುತ್ತದೆ. ಅದೇ ರೀತಿ, ಒಕ್ಕೂಟಕ್ಕೆ ನಷ್ಟವಾದಾಗ ಹಾಲಿನ ದರವನ್ನು ಕಡಿತಗೊಳಿಸಲಾಗುತ್ತದೆ. ಸದ್ಯ, ಬಮುಲ್ ನಷ್ಟದಲ್ಲಿದ್ದು, ಹಾಲಿನ ದರವನ್ನು ಕಡಿತ ಗೊಳಿಸುತ್ತೇವೆ” ಎಂದು ಹೇಳಿದ್ದಾರೆ.
ಬಮುಲ್ ನಿರ್ಧಾರವನ್ನು ಖಂಡಿಸಿರುವ ರೈತರು ಮತ್ತು ರೈತ ಸಂಘದ ಕಾರ್ಯಕರ್ತರು ಬಮೂಲ್ ಹಾಲು ಕೇಂದ್ರದ ಎದುರು ಪ್ರತಿಭಟನೆ ನಡೆಸಿದ್ದಾರೆ. “ವೈಜ್ಞಾನಿಕವಾಗಿ ಹಾಲಿನ ಬೆಲೆ ನಿಗದಿ ಮಾಡದೆ ಒಕ್ಕೂಟವು ರೈತರಿಗೆ ವಂಚಿಸುತ್ತಿದೆ. ರೈತರಿಂದ ಖರೀದಿಸುವ ಹಾಲಿಗೆ 3 ರೂ. ಹೆಚ್ಚಿಸುತ್ತೇವೆಂದು ಹೇಳಿದ್ದರು. ಈಗ, ಅದರಲ್ಲಿ 2 ರೂ. ಕಿತ್ತುಕೊಳ್ಳುತ್ತಿದ್ದಾರೆ. ಇದು ಅನ್ಯಾಯ” ಎಂದು ಕಿಡಿಕಾರಿದ್ದಾರೆ.
“ರಾಜ್ಯದಲ್ಲಿ ಬರಗಾಲ ಎದುರಾಗಿದೆ. ಜಾನುವಾರುಗಳ ಮೇವಿನ ಕೊರತೆ ಉಂಟಾಗಿದೆ. ಪಶುಆಹಾರದ ಬೆಲೆಯೂ ಏರುತ್ತಿದೆ. ಹೀಗಿರುವಾಗ ಹಾಲಿನ ಬೆಲೆ ಕಡಿತ ಮಡುವುದು ರೈತರಿಗೆ ಗಾಯದ ಮೆಲೆ ಬರೆ ಎಳೆದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಹಾಲು ಉತ್ಪಾದನೆಯಲ್ಲಿ ಬಮೂಲ್ ಪ್ರಥಮ ಸ್ಥಾನದಲ್ಲಿದೆ. ಆದರೆ, ಅನವಶ್ಯ ಆಡಳಿತ್ಮಾಕ ವೆಚ್ಚ, ಮತ್ತಿತರ ಸೌಲಭ್ಯದಿಂದ ಹೆಚ್ಚು ಖರ್ಚು ಮಾಡಲಾಗುತ್ತಿದೆ. ಬಮುತ್ ತನ್ನ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ರೈತರಿಗೆ ನ್ಯಾಯಯುತ ದರ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.