ಉತ್ತರ ಕನ್ನಡ ಜಿಲ್ಲೆಯ ಕೇಂದ್ರ ಭಾಗ ಕಾರವಾರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡುವಂತೆ ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆ ಪ್ರಮುಖರು ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
“ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ಕೆಲಸ ಆಗಿಲ್ಲ. 2022-2023ನೇ ಸಾಲಿನಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಿಸಲು ಸಮಾಜ ಕಲ್ಯಾಣ ಇಲಾಖೆಯಿಂದ ₹25 ಲಕ್ಷ ಅನುದಾನ ಬಿಡುಗಡೆಗೆ ಸರ್ಕಾರ ಆದೇಶಿಸಿತ್ತು. ಆದರೆ ಈವರಗೆ ಅನುದಾನವೂ ಬಿಡುಗಡೆ ಆಗಿಲ್ಲ” ಎಂದು ಮನವಿದಾರರು ದೂರಿದರು.
“ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳಿಗೆ, ಉನ್ನತ ವ್ಯಾಸಂಗಕ್ಕೆ, ವಿವಿಧ ಶಿಕ್ಷಣ ಸಂಸ್ಥೆಗಳಿಗೆ ನೂರಾರು ಕೋಟಿ ಹಣವನ್ನು ವೆಚ್ಚ ಮಾಡುತ್ತದೆ. ಆದರೆ ಪ್ರತಿಮೆ ನಿರ್ಮಾಣಕ್ಕೆ ಸಹಕಾರ ನೀಡುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಕೆಲಸದಲ್ಲಿ ಬದ್ಧತೆ ಹೊಂದಿರುವ ಅಧಿಕಾರಿಗಳು ಇಲಾಖೆಯ ಆಸ್ತಿ: ಭುವನೇಶ್ ಪಾಟೀಲ
“ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸಲು ಅನುದಾನ ಬಿಡುಗಡೆ ಮಾಡಬೇಕು. ಸರ್ಕಾರಕ್ಕೆ ಅನುದಾನ ಬಿಡುಗಡೆ ಮಾಡಲು ಆಗದೇ ಇದ್ದರೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದರೆ, ವಿವಿಧ ಸಂಘಟನೆಗಳು ಸೇರಿ ಸಾರ್ವಜನಿಕರಿಂದ ನೆರವು ಪಡೆದು ಜಿಲ್ಲಾ ಕೇಂದ್ರದಲ್ಲಿ ನಾವೇ ಬಾಬಾಸಾಹೇಬ್ ಅವರ ಪ್ರತಿಮೆ ನಿರ್ಮಾಣ ಮಾಡಲು ಸಿದ್ದರಿದ್ದೇವೆ” ಎಂದು ತಿಳಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಎಲಿಷಾ ಎಲಕಪಾಟಿ, ಅಶೋಕ ಚಲವಾದಿ, ನಿಂಗಪ್ಪ ಚಲವಾದಿ, ರಾಮು ಕೊರವರ, ರಾಜು ಬಾಬರ್ ಇದ್ದರು.